೫೨೯ ಕೋಟಿ ರೂ. ವಾರ್ಷಿಕ ಕ್ರಿಯಾ ಯೋಜನೆಗೆ ಜಿ.ಪಂ. ಅನುಮೋದನೆ

ತುಮಕೂರು, ನ. ೨೨- ಇಲ್ಲಿನ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಲಿಂಕ್ ಡಾಕ್ಯುಮೆಂಟ್‌ನಡಿ ೨೦೨೦-೨೧ನೇ ಸಾಲಿಗಾಗಿ ೫೨೯.೭೮ ಕೋಟಿ ರೂ.ಗಳ ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೋದನೆ ದೊರೆಯಿತು.
ನಗರದ ಜಿ.ಪಂ. ಸಭಾಂಗಣದಲ್ಲಿ ಅಧ್ಯಕ್ಷೆ ಲತಾ ರವಿಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಅನುಮೋದನೆ ದೊರೆತಿದ್ದು, ಲಿಂಕ್ ಡಾಕ್ಯುಮೆಂಟ್‌ನಡಿ ವಿವಿಧ ಇಲಾಖಾ ಕಾರ್ಯಕ್ರಮಗಳ ೫೨೯ ಕೋಟಿ ರೂ.ಗಳ ವಾರ್ಷಿಕ ಕ್ರಿಯಾ ಯೋಜನೆಯೊಂದಿಗೆ ಜಿಲ್ಲಾ ಪಂಚಾಯ್ತಿ ಶಾಸನಬದ್ಧ (ಅನಿರ್ಬಂಧಿತ) ಅನುದಾನದಡಿ ೬.೯೩ ಕೋಟಿ ರೂ. ಹಾಗೂ ೧೫ನೇ ಹಣಕಾಸು ಯೋಜನೆಯಡಿ ೮.೯೭ ಕೋಟಿ ರೂ.ಗಳ ಕ್ರಿಯಾ ಯೋಜನೆ ಅನುಮೋದನೆಗೆ ಜಿಲ್ಲಾ ಪಂಚಾಯ್ತಿಯ ಸರ್ವ ಸದಸ್ಯರು ಒಮ್ಮತದಿಂದ ಒಪ್ಪಿಗೆ ಸೂಚಿಸಿದರು.


ಸಭೆಯಲ್ಲಿ ಅನುಮೋದಿಸಿದ ಲಿಂಕ್ ಡಾಕ್ಯುಮೆಂಟ್‌ನ ವಾರ್ಷಿಕ ಕ್ರಿಯಾ ಯೋಜನೆಯಡಿ ನಿಗದಿಪಡಿಸಲಾದ ೫೨೯ ಕೋಟಿ ರೂ.ಗಳನ್ನು ಲೋಕೋಪಯೋಗಿ (ಪಂಚಾಯತ್ ರಾಜ್)ಗೆ ೬೬೬ ಲಕ್ಷ ರೂ., ಅಕ್ಷರ ದಾಸೋಹಕ್ಕಾಗಿ ೮೬೬೦ ಲಕ್ಷ, ಸಾಮಾನ್ಯ ಶಿಕ್ಷಣಕ್ಕಾಗಿ ೧೮೨೭೫ ಲಕ್ಷ, ಕ್ರೀಡಾ ಮತ್ತು ಯುವಜನ ಸೇವೆಗಾಗಿ ೧೩೮ ಲಕ್ಷ, ವೈದ್ಯಕೀಯ ಮತ್ತು ಜನಾರೋಗ್ಯಕ್ಕಾಗಿ ೫೯೦೨ ಲಕ್ಷ, ಕಲೆ ಮತ್ತು ಸಂಸ್ಕೃತಿಗಾಗಿ ೫ ಲಕ್ಷ, ಕುಟುಂಬ ಕಲ್ಯಾಣ ೩೨೮೮ ಲಕ್ಷ, ಆಯುಷ್ ೫೪೫ ಲಕ್ಷ, ಪರಿಶಿಷ್ಟ ಜಾತಿ ಕಲ್ಯಾಣ ೩೧೪೫ಲಕ್ಷ, ಪರಿಶಿಷ್ಟ ಪಂಗಡ ಕಲ್ಯಾಣ ೧೨೧೪ ಲಕ್ಷ, ಹಿಂದುಳಿದ ವರ್ಗಗಳ ಕಲ್ಯಾಣ ೫೫೮೭ ಲಕ್ಷ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ೪೯೦ ಲಕ್ಷ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ೧೨೬ ಲಕ್ಷ, ವಿಕಲಚೇತನರು ಮತ್ತು ಹಿರಿಯ ನಾಗರಿಕರ ಕಲ್ಯಾಣ ೨೨೫ ಲಕ್ಷ, ಕೃಷಿ ಇಲಾಖೆ ೪೦೮ ಲಕ್ಷ, ಭೂಸಾರ ಮತ್ತು ಜಲ ಸಂರಕ್ಷಣೆ ೧೪೬ಲಕ್ಷ, ತೋಟಗಾರಿಕೆ ೮೭೦ ಲಕ್ಷ, ಪಶುಸಂಗೋಪನೆ ೫೪೫ ಲಕ್ಷ, ಮೀನುಗಾರಿಕೆ ೨೩೩ ಲಕ್ಷ, ಅರಣ್ಯ ೯೫೯ ಲಕ್ಷ, ಆರ್‍ಡಿಪಿಆರ್ ೪೪೦ ಲಕ್ಷ, ಸಣ್ಣ ನೀರಾವರಿ ೨೦೪ ಲಕ್ಷ, ರೇಷ್ಮೆ ೪೩೬ ಲಕ್ಷ, ಗ್ರಾಮೀಣ ಮತ್ತು ಸಣ್ಣ ಕೈಗಾರಿಕೆ ೧೨೩ ಲಕ್ಷ, ಕೈಮಗ್ಗ ಮತ್ತು ಜವಳಿ ೬೬ ಲಕ್ಷ ಹಾಗೂ ಮತ್ತಿತರ ಸಾಮಾನ್ಯ ಸೇವೆಗಳಿಗಾಗಿ ವಿನಿಯೋಗಿಸಲಾಗಿದೆ.
ಕ್ರಿಯಾ ಯೋಜನೆಗೆ ಅನುಮೋದನೆ ದೊರೆತ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಜಿಲ್ಲಾ ಪಂಚಾಯ್ತಿಯ ೨೦೨೦-೨೧ನೇ ಸಾಲಿನ ಕ್ರಿಯಾ ಯೋಜನೆ ಅನುಮೋದನೆಗಾಗಿ ಜಿಲ್ಲೆಯ ಅಭಿವೃದ್ಧಿ ಹಿತದೃಷ್ಟಿಯಿಂದ ರಾಜಕೀಯ ಮರೆತು ಪಕ್ಷಾತೀತವಾಗಿ ತಮ್ಮ ಮೇಲೆ ಗೌರವವಿರಿಸಿ ಸಭೆಗೆ ಹಾಜರಾಗಿದ್ದ ಎಲ್ಲಾ ಜಿಲ್ಲಾ ಪಂಚಾಯ್ತಿ ಸದಸ್ಯರು, ಶಾಸಕರು ಹಾಗೂ ತಾಲ್ಲೂಕು ಪಂಚಾಯತಿ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರಲ್ಲದೆ, ಜನಸೇವೆಗಾಗಿ ಜನರು ನಮ್ಮನ್ನು ಆಯ್ಕೆ ಮಾಡಿರುವುದರಿಂದ ಜಿಲ್ಲೆಯ ಅಭಿವೃದ್ಧಿಯೇ ನಮ್ಮೆಲ್ಲರ ಮೂಲ ಮಂತ್ರವಾಗಬೇಕು ಎಂದು ಎಲ್ಲಾ ಜನಪ್ರತಿನಿಧಿಗಳಿಗೆ ಕಿವಿಮಾತು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ವಿವಿಧ ಸ್ಥಾಯಿ ಸಮಿತಿಗಳ ನಡಾವಳಿಗಳಿಗೆ ಅನುಮೋದನೆ ನೀಡಲಾಯಿತು. ನಂತರ ಆರೋಗ್ಯ ಇಲಾಖೆಯಲ್ಲಿ ಸಿಸಿ ಟಿವಿ ಹಾಗೂ ಬಯೋಮೆಟ್ರಿಕ್ ಅಳವಡಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಸಂಸದರಾದ ಜಿ.ಎಸ್. ಬಸವರಾಜು, ನಾರಾಯಣಸ್ವಾಮಿ, ತೆಂಗು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ಶಾಸಕ ಬಿ.ಸಿ.ನಾಗೇಶ್, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಶಾಸಕರಾದ ಡಾ. ರಂಗನಾಥ್, ವೆಂಕಟರಮಣಪ್ಪ, ಮಸಾಲ ಜಯರಾಂ, ಡಾ. ಸಿ.ಎಂ. ರಾಜೇಶ್‌ಗೌಡ, ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಪಂಚಾಯತ್ ಸದಸ್ಯರು, ತಾ.ಪಂ. ಅಧ್ಯಕ್ಷರು, ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.