೫೧೦೦ ಸಿಬ್ಬಂದಿ ನೇಮಕಕ್ಕೆ ಏರ್ ಇಂಡಿಯಾ ಸಿದ್ಧತೆ

ನವದೆಹಲಿ, ಫೆ.೨೫-ಇತ್ತೀಚಿಗಷ್ಟೇ ೩೦೦ಕ್ಕೂ ಅಧಿಕ ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಏರ್ ಇಂಡಿಯಾ ಇದೀಗ
ಈ ವರ್ಷದೊಳಗೆ ಪೈಲಟ್ ಗಳು ಮತ್ತು ಕ್ಯಾಬಿನ್ ಸಿಬ್ಬಂದಿಗಳ ಸೇರಿದಂತೆ ಒಟ್ಟು ೫೧೦೦ ಸಿಬ್ಬಂದಿ ನೇಮಕಕ್ಕೆ ಮುಂದಾಗಿದೆ.
೯೦೦ ಪೈಲಟ್‌ಗಳು ಸೇರಿದಂತೆ ಒಟ್ಟು ೫,೧೦೦ ಮಂದಿಗೆ ಟಾಟಾ ಸಮೂಹದ ಏರ್ ಇಂಡಿಯಾದಲ್ಲಿ ಉದ್ಯೋಗಾವಕಾಶ ಸಿಗಲಿದೆ. ದೇಶದ ನಾನಾ ಸ್ಥಳಗಳಲ್ಲಿ ನೇಮಕಾತಿ ನಡೆಯಲಿದೆ. ಬಳಿಕ ೧೫ ದಿನಗಳ ತರಬೇತಿ ನೀಡಲಾಗುವುದು.
೨೦೨೨ರ ಮೇ ಮತ್ತು ೨೦೨೩ರ ಫೆಬ್ರವರಿ ನಡುವೆ ಏರ್ ಇಂಡಿಯಾ ೧೯೦೦ ಕ್ಯಾಬಿನ್ ಸಿಬ್ಬಂದಿಯನ್ನು ನೇಮಿಸಿತ್ತು. ಏರ್ ಇಂಡಿಯಾ ಮುಂದಿನ ೧೦ ವರ್ಷಗಳಲ್ಲಿ ೪೭೦ ವಿಮಾನಗಳನ್ನು ಖರೀದಿಸಲು ಏರ್‌ಬಸ್ ಮತ್ತು ಬೋಯಿಂಗ್ ಜತೆ ಇತ್ತೀಚೆಗೆ ಒಪ್ಪಂದ ಮಾಡಿಕೊಂಡಿದೆ. ಈ ವಿಮಾನ ಖರೀದಿ ೮೪೦ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ.
ಏರ್‌ಬಸ್ ಫ್ರಾನ್ಸ್ ಮೂಲದ ಏರ್‌ಲೈನ್ ಆಗಿದ್ದರೆ, ಬೋಯಿಂಗ್ ಅಮೆರಿಕ ಮೂಲದ ಏರ್‌ಲೈನ್ ಕಂಪನಿಯಾಗಿದೆ. ಏರ್ ಇಂಡಿಯಾವು ಏರ್‌ಬಸ್‌ನಿಂದ ಕಳೆದ ೧೭ ವರ್ಷಗಳ ಬಳಿಕ ಮೊದಲ ಸಲ ವಿಮಾನವನ್ನು ಖರೀದಿಸುತ್ತಿದೆ. ಈ ಡೀಲ್ ಪರಿಣಾಮ ಅಮೆರಿಕದಲ್ಲಿ ೧೦ ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ.
ಭಾರತಕ್ಕೆ ಮುಂದಿನ ೧೫ ವರ್ಷಗಳಲ್ಲಿ ೨,೦೦೦ ವಿಮಾನಗಳ ಅಗತ್ಯವಿದೆ. ಏರ್ ಇಂಡಿಯಾದ ಐತಿಹಾಸಿಕ ವಿಮಾನಗಳ ಖರೀದಿ ಡೀಲ್‌ನ ಮೌಲ್ಯ ೧೧೫ ಶತಕೋಟಿ ಡಾಲರ್. ಹೀಗಾಗಿ ಭಾರತದಲ್ಲೂ ಮುಂದಿನ ದಶಕದಲ್ಲಿ ಏರ್ ಇಂಡಿಯಾ ಒಂದರಲ್ಲಿಯೇ ಸಾವಿರಾರು ಉದ್ಯೋಗ ಸೃಷ್ಟಿಯಾಗಲಿದೆ.