೫೦ ಶಾಸಕರ ಕರೆ ತರಲು ಬಿಜೆಪಿ ಜತೆ ಕೈ ನಾಯಕರ ಚರ್ಚೆ: ಎಚ್‌ಡಿಕೆ ಬಾಂಬ್

ಹಾಸನ, ಡಿ. ೧೦- ರಾಜ್ಯದ ಕಾಂಗ್ರೆಸ್ ನಾಯಕರೊಬ್ಬರು ಲೋಕಸಭಾ ಚುನಾವಣೆಯ ನಂತರ ೫೦ ಶಾಸಕರನ್ನು ಕರೆದುಕೊಂಡು ಬರುತ್ತೇನೆ ಎಂದು ಬಿಜೆಪಿಯ ಕೇಂದ್ರ ನಾಯಕರಿಗೆ ಹೇಳಿದ್ದಾರೆ ಎಂಬ ಹೊಸ ಬಾಂಬ್‌ನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಕಿದ್ದಾರೆ.
ಹಾಸನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರು ೫೦ ಶಾಸಕರನ್ನು ಕರೆತರುವ ಬಗ್ಗೆ ಬಿಜೆಪಿ ನಾಯಕರ ಜತೆ ಮಾತನಾಡಿದ್ದಾರೆ ಎಂಬ ಮಾಹಿತಿ ತಮಗಿದೆ. ಈಗಲೇ ಆ ನಾಯಕನ ಹೆಸರನ್ನು ಬಹಿರಂಗಪಡಿಸಲ್ಲ ಎಂದರು.
೫೦ ಶಾಸಕರನ್ನು ಕರೆದುಕೊಂಡು ಹೋಗಲು ಸಣ್ಣಪುಟ್ಟವರಿಂದ ಸಾಧ್ಯವೇ, ನೀವೇ ಹೇಳಿ ಎಂದ ಅವರು, ಲೋಕಸಭಾ ಚುನಾವಣೆಯ ನಂತರ ರಾಜ್ಯದಲ್ಲೂ ಮಹಾರಾಷ್ಟ್ರ ಮಾದರಿಯಲ್ಲೇ ಬೆಳವಣಿಗೆಗಳು ಆಗುತ್ತವೆ ಎಂದು ಭವಿಷ್ಯ ನುಡಿದರು.ಇವತ್ತಿನ ರಾಜಕಾರಣ ನೋಡಿದರೆ ಏನು ಬೇಕಾದರೂ ನಡೆಯಬಹುದು. ಇಲ್ಲಿ ಯಾರಿಗೂ ನಿಷ್ಠೆ, ಪ್ರಾಮಾಣಿಕತೆ ಉಳಿದಿಲ್ಲ. ಅವರವರ ಸ್ವಾರ್ಥಕ್ಕೆ ಏನೇನೂ ಆಗಬೇಕೋ ಅದನ್ನು ಮಾಡುತ್ತಾರೆ. ತಮಗೆ ಅನುಕೂಲವಾಗುವ ಕಡೆ ಹೋಗುತ್ತಾರೆ ಎಂದು ಹೇಳಿದರು.
ಲೋಕಸಭಾ ಚುನಾವಣೆಯ ವರೆಗೂ ನನಗೆ ತೊಂದರೆ ಕೊಡಬೇಡಿ. ಲೋಕಸಭಾ ಚುನಾವಣೆಯ ನಂತರ ನಾನೇ ೫೦-೬೦ ಶಾಸಕರನ್ನು ಕರೆ ತರುತ್ತೇನೆ ಎಂದು ಕಾಂಗ್ರೆಸ್ ನಾಯಕರು ಕೇಂದ್ರದ ಬಿಜೆಪಿ ನಾಯಕರ ಮುಂದೆ ಅರ್ಜಿ ಹಾಕಿಕೊಂಡಿದ್ದಾರೆ. ಮುಂದೆ ಏನಾಗುತ್ತದೋ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಕಾಂಗ್ರೆಸ್‌ನ ಯಾವುದೇ ನಾಯಕರ ಹೆಸರನ್ನು ಉಲ್ಲೇಖಿಸದೆ ಹೇಳಿ ಲೋಕಸಭಾ ಚುನಾವಣೆಯ ನಂತರ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗುವ ಸುಳಿವು ನೀಡಿದರು.
ಯಾವ ಕಾಂಗ್ರೆಸ್ ನಾಯಕ ಬಿಜೆಪಿ ಕೇಂದ್ರದ ನಾಯಕರನ್ನು ಭೇಟಿ ಮಾಡಿ ೫೦ ಶಾಸಕರನ್ನು ಕರೆ ತರುತ್ತೇನೆ ಎಂದು ಹೇಳಿದ್ದಾರೆ ಎಂಬ ಗುಟ್ಟು ಬಿಡದ ಕುಮಾರಸ್ವಾಮಿ, ಇದೆಲ್ಲಾ ಸಣ್ಣಪುಟ್ಟ ನಾಯಕರ ಕೈಯಲ್ಲಿ ಆಗುತ್ತಾ, ಆ ನಾಯಕ ದೊಡ್ಡ ನಾಯಕರೇ ಆಗುತ್ತಾರೆ ಎಂದು ಹೇಳಿ, ಹೆಸರನ್ನು ಬಹಿರಂಗಪಡಿಸಲಿಲ್ಲ.
ಸಿದ್ದರಾಮಯ್ಯ ವಿರುದ್ದ ಕಿಡಿ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾತಿ ಹೆಸರಿನಲ್ಲಿ ವೈಷಮ್ಯ ಬಿತ್ತಲು ಪ್ರಯತ್ನ ನಡೆಸಿದ್ದಾರೆ. ಜಾತಿ ಗಣತಿ ಏಕೆ ಬೇಕು, ಆರ್ಥಿಕ ಸಾಮಾಜಿಕ ಸ್ಥಿತಿಗತಿಯ ಗಣತಿ ಸಾಕು ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಹೆಸರಿನಲ್ಲಿ ಸಮಾಜವನ್ನು ಎತ್ತಿ ಕಟ್ಟುತ್ತಿದ್ದಾರೆ. ೨ನೇ ಬಾರಿ ಸಾಹಸ ಮಾಡಿ ಮುಖ್ಯಮಂತ್ರಿಯಾಗಿದ್ದಾರೆ. ಲೋಕಸಭಾ ಚುನಾವಣೆಯ ನಂತರ ಅವರ ಪರಿಸ್ಥಿತಿ ಏನಾಗುತ್ತದೋ ಗೊತ್ತಿಲ್ಲ ಎಂದು ಅವರು ಹೇಳಿದರು.
ಮುಸ್ಲಿಂ ಸಮುದಾಯಕ್ಕೆ ೧೦ ಸಾವಿರ ಕೋಟಿ ರೂ. ಅನುದಾನ ಕೊಡಲು ನನ್ನ ವಿರೋಧ ಇಲ್ಲ. ಹಿಂದೂಗಳು ಎಂದರೆ ಕೇವಲ ಮೇಲ್ವರ್ಗದ ಜನರಲ್ಲ. ಅಲ್ಲಿ ದಲಿತರು ಇದ್ದಾರೆ, ಎಲ್ಲಾ ಜಾತಿಯ ಬಡವರೂ ಇದ್ದಾರೆ. ಅವರ ಪರಿಸ್ಥಿತಿ ಏನು, ಮತಕ್ಕಾಗಿ ೧೦ ಸಾವಿರ ಕೋಟಿ ಕೊಡುತ್ತೇನೆ ಎನ್ನುವ ಮುಖ್ಯಮಂತ್ರಿಗಳ ಹೇಳಿಕೆ ಸರಿಯಿಲ್ಲ ಎಂದು ಟೀಕಿಸಿದರು.ಕಾಂಗ್ರೆಸ್‌ನ ಹರಿಪ್ರಸಾದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ನಡೆಸಿರುವ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬರೀ ಹರಿಪ್ರಸಾದ್ ಅಲ್ಲ ಸಾಕಷ್ಟು ಜನ ಇದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನಲ್ಲಿ ಮತ್ತಷ್ಟು ಭಿನ್ನ ಧ್ವನಿಗಳು ಬರುತ್ತವೆ ಎಂದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಈ ಸರ್ಕಾರದಲ್ಲೂ ಕಮೀಷನ್ ಇದೆ ಎಂದು ಹೇಳಿದ್ದಾರೆ. ಹಾಗಾದರೆ ಅದನ್ನು ಏಕೆ ನಿಲ್ಲಿಸಲು ಆಗುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.