೫೦ ಲಕ್ಷ ಬಿಜೆಪಿ ಕಾರ್ಯಕರ್ತರ ಜತೆ ನಾಳೆ ಮೋದಿ ಸಂವಾದ

ಬೆಂಗಳೂರು,ಏ.೨೬- ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಮತ್ತೊಮ್ಮೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವ ಪಣ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ೫೦ ಲಕ್ಷ ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ.ರಾಜ್ಯಾದ್ಯಂತ ಏಕಕಾಲದಲ್ಲಿ ಎಲ್ಲಾ ಬೂತ್ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ನಡೆಸುವ ಮೂಲಕ ಚುನಾವಣಾ ಕಣ ಮತ್ತಷ್ಟು ರಂಗೇರುವಂತೆ ಮಾಡಲಿದ್ದಾರೆ.
ಚುನಾವಣೆ ಘೋಷಣೆಯಾಗುವ ಮುನ್ನ ಹಲವು ಬಾರಿ ರಾಜ್ಯಕ್ಕೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿಯವರು ಅಧಿಕೃತವಾಗಿ ನಾಳೆಯಿಂದ ರಾಜ್ಯದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ. ಹೀಗಾಗಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಮತ್ತಷ್ಟು ರಣೋತ್ಸಾಹ ಬಂದಿದೆ.
ರಾಜ್ಯದ ೫೮,೧೧೨ ಬೂತ್‌ಗಳಿಂದ ಪಕ್ಷದ ಕಾರ್ಯಕರ್ತರು ಸಭೆ ಸೇರಲಿದ್ದಾರೆ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್ ಮೂಲಕ ಸಂವಾದ ನಡೆಸಲಿದ್ದಾರೆ ಎಂದು ಬಿಜೆಪಿ ಪಕ್ಷದ ಉನ್ನತ ಮೂಲಗಳು ತಿಳಿಸಿವೆ.ಕರ್ನಾಟಕದಲ್ಲಿ ’ಡಬಲ್ ಇಂಜಿನ್’ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದನ್ನು ಖಚಿತಪಡಿಸಿಕೊಳ್ಳಲು ಲಕ್ಷಾಂತರ ಪಕ್ಷದ ಕಾರ್ಯಕರ್ತರೊಂದಿಗೆ ಪ್ರಧಾನಿ ಸೇರಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ
ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಅಖಾಡಕ್ಕೆ ಹರಿಯುತ್ತಿರುವುದರಿಂದ ಪಕ್ಷದ ಕಾರ್ಯಕರ್ತರಲ್ಲಿ ಸಹಜವಾಗಿ ಉತ್ಸಾಹ ಮತ್ತು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.ರಾಜ್ಯದ ೨೨೪ ಸದಸ್ಯ ಬಲದ ವಿಧಾನಸಭೆಗೆ ಮೇ ೧೦ರಂದು ಚುನಾವಣೆ ನಡೆಯಲಿದ್ದು, ಮೇ ೧೩ರಂದು ಫಲಿತಾಂಶ ಪ್ರಕಟವಾಗಲಿದೆ.ಹೀಗಾಗಿ ಮತ್ತೊಂದು ಅವರಿಗೆ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎನ್ನುವ ಉಮೇಲಿನಲ್ಲಿ ಪ್ರಧಾನಿ ನರೇಂದ್ರ ಮೋದಿ ,ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ದಾ, ಹಾಗೂ ಕೇಂದ್ರ ಸಚಿವ ಅಮಿತ್ ಶಾ ಸೇರಿದಂತೆ ಮತ್ತಿತರ ಹಿರಿಯ ನಾಯಕರು ರಾಜ್ಯದಲ್ಲಿ ಎಡಬಿಡದೆ ಪ್ರಚಾರದಲ್ಲಿ ತೊಡಗಿದ್ದಾರೆ