೫ನೇಹಂತ,ನಾಳೆ ಮತದಾನ

ನವದೆಹಲಿ, ಮೇ ೧೯- ಲೋಕಸಭಾ ಚುನಾವಣೆಯ ೫ನೇ ಹಂತದ ಮತದಾನ ನಾಳೆ ನಡೆಯಲಿದ್ದು, ಕಾಂಗ್ರೆಸ್‌ನ ಯುವರಾಜ ರಾಹುಲ್‌ಗಾಂಧಿ, ಕೇಂದ್ರ ಸಚಿವರಾದ ರಾಜನಾಥ್‌ಸಿಂಗ್, ಸ್ಮೃತಿ ಇರಾನಿ, ಪಿಯೂಷ್ ಗೋಯಲ್, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಸೇರಿದಂತೆ ಹಲವು ಘಟಾನುಘಟಿ ನಾಯಕರುಗಳ ಭವಿಷ್ಯ ನಾಳೆ ನಿರ್ಧಾರವಾಗಲಿದೆ.೮ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ೪೯ ಲೋಕಸಭಾ ಕ್ಷೇತ್ರಗಳಲ್ಲಿ ನಾಳೆ ೫ನೇ ಹಂತದ ಮತದಾನ ನಡೆಯಲಿದ್ದು, ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಚುನಾವಣಾ ಆಯೋಗ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ.ನಾಳೆ ಮತದಾನ ನಡೆಯಲಿರುವ ೪೯ ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟಾರೆ ೬೯೫ ಅಭ್ಯರ್ಥಿಗಳು ಕಣದಲ್ಲಿದ್ದು, ಇವರುಗಳ ರಾಜಕೀಯ ಭವಿಷ್ಯಕ್ಕೆ ನಾಳೆ ಮತದಾರ ಮುದ್ರೆ ಒತ್ತಲಿದ್ದಾನೆ.ನಾಳೆ ನಡೆಯಲಿರುವ ೫ನೇ ಹಂತದ ಮತದಾನದಲ್ಲಿ ಉತ್ತರ ಪ್ರದೇಶದ ರಾಯ್‌ಭರೇಲಿಯಿಂದ ಕಾಂಗ್ರೆಸ್‌ನ ರಾಹುಲ್‌ಗಾಂಧಿ ಕಣದಲ್ಲಿದ್ದು, ಹಾಗೆಯೇ ಲಕ್ನೋಯಿಂದ ಕೇಂದ್ರದ ರಕ್ಷಣಾ ಸಚಿವ ರಾಜನಾಥ್‌ಸಿಂಗ್, ಅಮೇಥಿಯಿಂದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಉತ್ತರ ಮುಂಬೈನಿಂದ ಕೇಂದ್ರ ಸಚಿವ ಪಿಯೂಷ್ ಗೋಯಲ್, ಜಮ್ಮು ಕಾಶ್ಮೀರದ ಬಾರಾಮುಲ್ಲಾಯಿಂದ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ, ಬಿಹಾರದ ಹಾಜಿಪುರದಿಂದ ಲೋಕಜನಶಕ್ತಿ ಪಕ್ಷದ ಅಧ್ಯಕ್ಷ ಸಿರಾಗ್ ಫಾಸ್ವಾನ್, ಸರನ್‌ನಿಂದ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲ್‌ಪ್ರಸಾದ್ ಪುತ್ರಿ ರೋಹಿಣಿ ಆಚಾರ್ಯ ಸ್ಪರ್ಧೆಯಲ್ಲಿದ್ದರೆ, ಇಲ್ಲಿ ಕೇಂದ್ರದ ಮಾಜಿ ಸಚಿವ ರಾಜೀವ್‌ಪ್ರತಾಪ್ ರೂಡಿ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಭಾರತದ ಕುಸ್ತಿ ಫೆಡರೇಶನ್ ಅಧ್ಯಕ್ಷರಾಗಿ ಹಲವು ವಿವಾದಗಳಲ್ಲಿ ಸಿಲುಕಿಕೊಂಡಿದ್ದ ಸಂಸದ ಬ್ರಿಜ್ ಭೂಷಣ್ ಅವರ ಪುತ್ರ ಕರಣ್‌ಸಿಂಗ್ ಉತ್ತರ ಪ್ರದೇಶದ ಕೈಸರ್‌ಗಂಜ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಇವರೆಲ್ಲರ ರಾಜಕೀಯ ಭವಿಷ್ಯವು ನಾಳೆ ನಿರ್ಧಾರವಾಗಲಿದೆ.ನಾಳೆ ಬಿಹಾರದ ೫, ಜಾರ್ಖಂಡ್‌ನ ೩, ಮಹಾರಾಷ್ಟ್ರದ ೧೩, ಒಡಿಸ್ಸಾದ ೫, ಉತ್ತರ ಪ್ರದೇಶದ ೧೪, ಪಶ್ಚಿಮಬಂಗಾಳದ ೭, ಜಮ್ಮುಕಾಶ್ಮೀರದ ೧ ಮತ್ತು ಕೇಂದ್ರಾಡಳಿತ ಪ್ರದೇಶ ಲಡಾಕ್‌ನ ೧ ಸ್ಥಾನಗಳಿಗೆ ಮತದಾನ ನಡೆಯಲಿದೆ.
ಲೋಕಸಭಾ ಚುನಾವಣೆಗೆ ಒಟ್ಟಾರೆ ೭ ಹಂತಗಳಲ್ಲಿ ಮತದಾನ ನಡೆಯಲಿದ್ದು, ಈಗಾಗಲೇ ೪ ಹಂತದ ಮತದಾನ ಪೂರ್ಣಗೊಂಡಿದೆ.
ಏಪ್ರಿಲ್ ೧೯ ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆದಿತ್ತು. ಏ. ೨೬ ೨ನೇ ಹಂತ, ಮೇ ೭ ೩ನೇ ಹಂತ, ಮೇ ೧೩ ೪ನೇ ಹಂತದ ನಡೆದಿತ್ತು. ನಾಳೆ ಮೇ ೨೦ ೫ನೇ ಹಂತದ ಮತದಾನ ನಡೆಯಲಿದ್ದು, ಮೇ ೨೫ ೬ನೇ ಹಂತ ಮತ್ತು ಜೂನ್ ೧ ರಂದು ೭ನೇ ಹಾಗೂ ಅಂತಿಮ ಹಂತದ ಮತದಾನ ನಡೆಯಲಿದೆ.
ಮತ ಎಣಿಕೆ ಜೂನ್ ೪ ರಂದು ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.
ನಾಳೆ ನಡೆಯಲಿರುವ ೫ನೇ ಹಂತದ ಮತದಾನ ಶಾಂತಿಯುತ ಹಾಗೂ ಸುಗಮವಾಗಿ ನಡೆಯಲು ಚುನಾವಣಾ ಆಯೋಗ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದು, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಕ್ಷೇತ್ರಗಳಲ್ಲಿ ಹೆಚ್ಚಿನ ಭದ್ರತೆಗಳನ್ನು ಒದಗಿಸಲಾಗಿದೆ.
ನಾಳಿನ ಮತದಾನದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದ್ದು, ಎಲ್ಲ ಕ್ಷೇತ್ರಗಳಲ್ಲೂ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ.
ನಾಳೆ ಮತದಾನ ಬೆಳಿಗ್ಗೆ ೭ ರಿಂದ ಸಂಜೆ ೬ ಗಂಟೆಯವರೆಗೂ ನಡೆಯಲಿದ್ದು, ಇಂದು ಎಲ್ಲ ಮತಗಟ್ಟೆಗಳಿಗೂ ವಿದ್ಯುನ್ಮಾನ ಮತಯಂತ್ರ ಮತ್ತು ವಿವಿಪ್ಯಾಟ್ ಯಂತ್ರಗಳ ಜತೆ ಸಿಬ್ಬಂದಿ ತೆರಳಿದ್ದು, ಸುಗಮ ಮತದಾನಕ್ಕೆ ಎಲ್ಲ ವ್ಯವಸ್ಥೆಗಳು ಸಾಂಘವಾಗಿ ನಡೆದಿವೆ.
ನಾಳೆ ನಡೆಯಲಿರುವ ೪೯ ಕ್ಷೇತ್ರಗಳ ಚುನಾವಣೆಯಲ್ಲಿ ಹಲವು ಘಟಾನುಘಟಿ ನಾಯಕರುಗಳು ಸ್ಪರ್ಧೆಯಲ್ಲಿರುವ ಕಾರಣ ಜಿದ್ದಾಜಿದ್ದಿಯ ಹೋರಾಟ ನಡೆದಿದ್ದು, ಚುನಾವಣಾ ಪ್ರಚಾರದ ಅಬ್ಬರದ ಸಹ ತಾರಕಕ್ಕೇರಿತ್ತು. ನಿನ್ನೆ ಸಂಜೆಯೇ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಇಂದು ಕೊನೆ ಗಳಿಗೆಯಲ್ಲಿ ಮತದಾರರ ಮನೆ ಮನೆಗೆ ತೆರಳಿ ಮತದಾರರ ಮನ ಗೆಲ್ಲುವ ಕಸರತ್ತನ್ನು ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ನಡೆಸಿದ್ದಾರೆ.