೫ಜಿ ಅಂಬಾನಿ ಪೈಪೋಟಿ

ದೆಹಲಿ, ಜು.೧- ಭಾರತದಲ್ಲಿ ಅಗ್ಗದ ೪ಜಿ ಇಂಟರ್‌ನೆಟ್ ಮೂಲಕ ವಿಶ್ವದ ಗಮನ ಸೆಳೆದಿದ್ದ ಮುಖೇಶ್ ಅಂಬಾನಿ ಇದೀಗ ೫ಜಿ ಹರಾಜು ವಿಚಾರದಲ್ಲಿ ಏಷ್ಯಾದ ನಂಬರ್ ಒನ್ ಶ್ರೀಮಂತ ಗೌತಮ್ ಅದಾನಿ ಎದುರು ಪ್ರಬಲ ಪೈಪೋಟಿ ಎದುರಿಸಿದ್ದಾರೆ.
೨೦೧೪ರ ವೇಳೆಯಲ್ಲಿ ಭಾರತದಲ್ಲಿ ಅಗ್ಗದ ಇಂಟರ್‌ನೆಟ್ ಡೇಟಾ ಒದಗಿಸುವ ಮೂಲಕ ರಿಲಾಯನ್ಸ್ ಜಿಯೋ ಬಳಿಕ ಅಂತಾರ್ಜಾಲ ಕ್ಷೇತ್ರದಲ್ಲಿ ದೇಶದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿತ್ತು. ಇದರ ಪರಿಣಾಮ ಆ ಸಮಯದಲ್ಲಿ ಏಕಾಧಿಪತಿಯಾಗಿ ಮುನ್ನುಗುತ್ತಿದ್ದ ಏರ್‌ಟೆಲ್ ಆದಾಯಕ್ಕೆ ಜಿಯೋ ಭಾರೀ ಪೆಟ್ಟು ನೀಡುವುದರ ಜೊತೆಗೆ ತನ್ನ ಆದಾಯವನ್ನು ಕೂಡ ಹೆಚ್ಚಿಸಿತ್ತು. ಸದ್ಯ ಕೇಂದ್ರ ಸರ್ಕಾರದ ೫ಜಿ ತರಂಗಾಂತರ ಹರಾಜಿನಲ್ಲಿ ಕೂಡ ಜಿಯೋ ಪ್ರಬಲ ಕಂಪೆನಿಯಾಗಿ ಹೊರಹೊಮ್ಮುವ ಎಲ್ಲಾ ಸಾಧ್ಯತೆಗಳಿತ್ತು ಎಂಬ ಅಂಶ ಈಗಾಗಲೇ ಸುಳ್ಳಾಗಿದೆ. ಯಾಕೆಂದರೆ ಜಿಯೋ ಹಾಗೂ ಭಾರ್ತಿ ಏರ್‌ಟೆಲ್ ಸಮೂಹಕ್ಕೆ ಇದೀಗ ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹ ಭಾರೀ ಪೈಪೋಟಿ ನೀಡಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಭಾರತದ ಮೊಬೈಲ್ ಸೇವೆಯಲ್ಲಿ ಪ್ರಮುಖ ಕಂಪೆನಿಯಾಗಿರುವ ಜಿಯೋಗೆ ಟೆಲಿಕಾಂ ಕ್ಷೇತ್ರದಲ್ಲಿ ಯಾವುದೇ ಪೈಪೋಟಿ ನೀಡಲ್ಲ ಅಥವಾ ದೇಶದಲ್ಲಿ ಕ್ಷೇತ್ರಕ್ಕೆ ಪ್ರವೇಶಿಸಲ್ಲ ಎಂದು ಹೇಳುತ್ತಾ ಬಂದಿದ್ದ ಅದಾನಿ ಸಮೂಹ ಇದೀಗ ಅಚ್ಚರಿಯ ರೀತಿಯಲ್ಲಿ ೫ಜಿ ತರಂಗಾಂತರ ಹರಾಜಿನಲ್ಲಿ ಭಾಗಿಯಾಗಿರುವುದು ವಿಶ್ವದ ಗಮನ ಸೆಳೆದಿದೆ. ಬಂದರು ಹಾಗೂ ವಿಮಾನಯಾನ ಕ್ಷೇತ್ರದಲ್ಲೇ ಅದಾನಿ ಸಮೂಹ ತನ್ನ ಉದ್ಯಮವನ್ನು ಮುಂದುವರೆಸಲಿದೆ ಎಂಬ ಮಾತು ಬಲವಾಗಿ ಕೇಳಿಬರುತ್ತಿತ್ತು. ಆದರೆ ಇದೀಗ ಅದಾನಿ ಸಮೂಹ ೫ಜಿ ಕ್ಷೇತ್ರದಲ್ಲಿ ಕೈಯಾಡಿಸಿರುವುದು ಭವಿಷ್ಯದಲ್ಲಿ ವಿಶ್ವದ ಇತರೆ ಉದ್ಯಮಿಗಳಿಗೆ ಪ್ರಬಲ ಪೈಪೋಟಿ ನೀಡುವ ಸಾಧ್ಯತೆ ಇದೆ. ಅದರಲ್ಲೂ ಮುಖ್ಯವಾಗಿ ವಯರ್‌ಲೆಸ್ ದೂರಸಂಪರ್ಕ ಸೇವೆಯಲ್ಲಿ ಅದಾನಿ ಸಮೂಹದ ಬಳಿ ಲೈಸೆನ್ಸ್ ಕೂಡ ಇಲ್ಲದಿದ್ದರೂ ಇದೀಗ ತರಂಗಾಂತರ ಹರಾಜಿನಲ್ಲಿ ಭಾಗಿಯಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಇದು ಅದಾನಿ ಸಮೂಹ ಭವಿಷ್ಯದಲ್ಲಿ ಟೆಲಿಕಾಂ ಕ್ಷೇತ್ರಕ್ಕೆ ಪ್ರವೇಶಿಸುವ ಸಾಧ್ಯತೆಯನ್ನು ಹೆಚ್ಚಿಸಿದೆ. ಹಾಗಾಗಿ ಭವಿಷ್ಯದಲ್ಲಿ ಅದಾನಿ ಹಾಗೂ ಅಂಬಾನಿ ನಡುವಿನ ಪೈಪೋಟಿ ಮುಂದುವರೆಯಲಿದೆ ಎನ್ನಲಾಗಿದೆ. ಬಹುತೇಕ ಎಲ್ಲಾ ಕ್ಷೇತ್ರದಲ್ಲೂ ಮುನ್ನುಗುತ್ತಿರುವ ಹಿನ್ನೆಲೆಯಲ್ಲಿ ಅದಾನಿ ಸಮೂಹ ಇದೀಗ ಟೆಲಿಕಾಂ ಕ್ಷೇತ್ರಕ್ಕೂ ಕಾಲಿರಿಸಿರುವುದು ಮಾರುಕಟ್ಟೆ ಪಂಡಿತರಲ್ಲಿ ಅಚ್ಚರಿಗೆ ಕಾರಣವಾಗಿಲ್ಲ. ಮುಂದೆ ಭವಿಷ್ಯದಲ್ಲಿ ೫ಜಿ ತರಂಗಾಂತರ ಕ್ಷೇತ್ರದಲ್ಲಿ ಅದಾನಿ ಹಾಗೂ ಅಂಬಾನಿ ನಡುವೆ ಭಾರೀ ಪೈಪೋಟಿ ನಡೆಯಲಿದ್ದು, ಟೆಲಿಕಾಂ ಗ್ರಾಹಕರಿಗೆ ಲಾಭ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ.