೫ಎ ನೀರಾವರಿ ಯೋಜನೆಗೆ ಹಣ ಮೀಸಲಿಗೆ ಒತ್ತಾಯ

ಮಸ್ಕಿ,ಡಿ.೨೯- ನಾರಾಯಣಪೂರ ಬಲದಂಡೆ ೫ಎ ಕಾಲುವೆ ಯೋಜನೆಯಿಂದ ಹರಿ ನೀರಾವರಿ ಪ್ರದೇಶಕ್ಕೆ ನಂದವಾಡಗಿಯ ೨ನೇ ಹಂತದಲ್ಲಿ ಹರಿ ನೀರಾವರಿ ಒದಗಿಸಲು ಸರಕಾರ ಚಿಂತಿಸುತ್ತಿರುವದನ್ನು ರೈತರು ವಿರೋಧಿಸುತ್ತಿದ್ದಾರೆ. ಆದ್ದರಿಂದ ೫ಎ ನಾಲೆಗೆ ನೀರು ಮತ್ತು ಹಣವನ್ನು ರಾಜ್ಯ ಸರಕಾರ ಮೀಸಲಿಡಬೇಕೆಂದು ಎನ್‌ಆರ್‌ಬಿಸಿ ೫ಎ ಕಾಲುವೆ ಹೋರಾಟ ಸಮಿತಿಯ ಅಧ್ಯಕ್ಷ ಬಸವರಾಜಪ್ಪಗೌಡ ಹರ್ವಾಪೂರು ಆಗ್ರಹಿಸಿದರು
ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು ಕ್ಷೇತ್ರದ ಹರಿ ನೀರಾವರಿ ಅನುಕೂಲವಿರುವ ಹಳ್ಳಿಗಳ ಪ್ರದೇಶದ ನೀರು ಮತ್ತು ಹಣವನ್ನು ರಾಜ್ಯ ಸರಕಾರ ಮತ್ತು ಕೆಬಿಜಿಎನ್‌ಎಲ್ ನಿಗಮದ ಅಧಿಕಾರಿಗಳು ವ್ಯಯ ಮಾಡದೆ ಎನ್‌ಆರ್‌ಬಿಸಿ ೫ಎ ಪಾಮನಕಲ್ಲೂರು ಶಾಖಾ ಕಾಲುವೆ ಯೋಜನೆಗೆ ಕಾಯ್ದಿರಿಸಬೇಕೆಂದರು.
ನಾಗರಡ್ಡೆಪ್ಪ ದೇವರಮನಿ ಮಾತನಾಡಿ, ಮಸ್ಕಿ ವಿಧಾನಸಭಾ ಕ್ಷೇತ್ರದ ೫೮ಕ್ಕೂ ಹೆಚ್ಚು ಹಳ್ಳಿ ಹಾಗೂ ರಾಯಚೂರು ವಿಧಾನಸಭಾ ಕ್ಷೇತ್ರದ ೨೮ ಹಳ್ಳಿಗಳು ಹಾಗೂ ಮಾನ್ವಿ ತಾಲೂಕಿನ ೪ ಹಳ್ಳಿಗಳ ಎನ್‌ಆರ್‌ಬಿಸಿ ೫ಎ ನಾಲೆಯಿಂದ ಹರಿ ನೀರಾವರಿ ಸಾದ್ಯತೆ ಇರುವದರಿಂದ ಅಧಿಕಾರಿಗಳು ಸರಕಾರಕ್ಕೆ ಮತ್ತು ಈ ಭಾಗದ ಜನಪ್ರತಿನಿಧಿಗಳಿಗೆ ತಪ್ಪು ಮಾಹಿತಿ ರವಾನಿಸುತ್ತಿರುವುದನ್ನು ಖಂಡಿಸುತ್ತೇವೆಂದರು.
ನಮಗೆ ನಂದವಾಡಗಿ ಏತ ನೀರಾವರಿ ಯೋಜನೆಗೆ ಬಿಡುಗಡೆಗೊಂಡ ೨.೨೫ ಟಿಎಂಸಿ ನೀರು ಮತ್ತು ೧೮೦೦ ಕೋಟಿ ರೂಪಾಯಿಗಳ ಸರಕಾರದ ಅನುಮೋದಿತ ನೀರು ಮತ್ತು ಹಣವನ್ನು ಖರ್ಚು ಮಾಡಿದರೆ ಅಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ.
ರಾಜಕಾರಣಿಗಳು ೫ಎ ಯೋಜನೆಯನ್ನು ರಾಜಕೀಯ ಭಾಷಣಕ್ಕೆ ಸೀಮಿತಗೊಳಿಸಿದ್ದಾರೆಂದು ಆರೋಪಿಸಿದರು. ೫ಎ ಯೋಜನೆಗೆ ಇರುವ ತಾಂತ್ರಿಕ ಸಮಸ್ಯೆಗಳನ್ನು ಲಿಖಿತ ರೂಪದಲ್ಲಿ ನೀಡಿ ಗೊಂದಲಗಳನ್ನು ನಿವಾರಿಸಿಕೊಳ್ಳಬೇಕೆಂದು ಆಗ್ರಹ ಪಡಿಸಿದರು. ೫ಎ ಯೋಜನೆಗೆ ರಾಜಕೀಯ ಇಚ್ಚಾಶಕ್ತಿಯ ಕೊರತೆ ಎದ್ದು ಕಾಣುತ್ತಿದ್ದು, ಅಧಿಕಾರಿಗಳು ಕೂಡ ರೈತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಪಾಮನಕಲ್ಲೂರಿನಲ್ಲಿ ೪೦ ದಿನಗಳಿಂದ ಅನಿರ್ಧಿಷ್ಟಾವಧಿ ಧರಣಿ ನಡೆಯುತ್ತಿದ್ದರೂ ಜಿಲ್ಲಾಡಳಿತ ಮಧ್ಯ ಪ್ರವೇಶ ಮಾಡದಿರುವದು ಖಂಡನೀಯ ಎಂದರು ಎನ್.ಶಿವನಗೌಡ ವಟಗಲ್ ಇದ್ದರು.

(೨೮,ಡಿ.ಎಂಎಸ್ಕೆ ಪೋಟೋ೦೨)