೪ ಶತಕೋಟಿ ಡಾಲರ್ ಮೌಲ್ಯದ ಷೇರು ಮಾರಾಟ ಮಾಡಿದ ಜೆಫ್

ನ್ಯೂಯಾರ್ಕ್, ಫೆ.೧೪- ೧೯೦ ಶತಕೋಟಿ ಡಾಲರ್ ಸಂಪತ್ತು ಹೊಂದುವ ಮೂಲಕ ಜಾಗತಿಕ ಮಟ್ಟದಲ್ಲಿ ಮೂರನೇ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಲಿಕೆಗೆ ಪಾತ್ರರಾಗಿರುವ ಜೆಫ್ ಬೆಜೋಸ್ ಇದೀಗ ತನ್ನ ಅಮೆಜಾನ್ ಸಂಸ್ಥೆಯಲ್ಲಿರುವ ೪ ಶತಕೋಟಿ ಡಾಲರ್ ಮೊತ್ತದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಸುಮಾರು ೨೪ ದಶಲಕ್ಷ ಅಮೆಜಾನ್ ಷೇರುಗಳನ್ನು ಫೆಬ್ರವರಿಯಲ್ಲಿ ಮಾರಾಟ ಮಾಡಲಾಗಿದೆ ಎಂದು ಸ್ವತಹ ಬೆಜೋಸ್ ತಿಳಿಸಿದ್ದಾರೆ.
೧೯೯೪ರಲ್ಲಿ ಆರಂಭಿಸಲಾಗಿದ್ದ ಅಮೆಜಾನ್ ಸಂಸ್ಥೆ ಇದೀಗ ಜಾಗತಿಕ ಮಟ್ಟದಲ್ಲಿ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಒಂದೆಂಬ ಖ್ಯಾತಿ ಹೊಂದಿದೆ. ಅಲ್ಲದೆ ೨೦೨೧ರಲ್ಲಿ ಬೆಜೋಸ್ ಅವರು ಕೊನೆಯ ಬಾರಿಗೆ ಅಮೆಜಾನ್ ಷೇರುಗಳನ್ನು ಮಾರಾಟ ಮಾಡಿದ್ದರು. ಇದೀಗ ಮೂರು ವರ್ಷಗಳ ಬಳಿಕ ಅಮೆಜಾನ್‌ನಲ್ಲಿರುವ ತನ್ನ ೨೪ ದಶಲಕ್ಷ ಷೇರುಗಳನ್ನು ಮಾರಾಟ ಮಾಡಿದ್ದು, ಇವುಗಳ ಒಟ್ಟು ಮೌಲ್ಯ ಸುಮಾರು ೪ ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ. ಅಲ್ಲದೆ ವರ್ಷಾಂತ್ಯದ ವೇಳೆಗೆ ಸುಮಾರು ೮.೪ ಶತಕೋಟಿ ಡಾಲರ್ ಮೌಲ್ಯದ ಅಮೆಜಾನ್‌ನಲ್ಲಿರುವ ೫೦ ದಶಲಕ್ಷ ಷೇರುಗಳನ್ನು ಮಾರಾಟ ಮಾಡುವ ಗುರಿ ಹೊಂದಲಾಗಿದೆ ಎಂದು ಕಳೆದ ತಿಂಗಳಲ್ಲಿ ಕಂಪೆನಿ ತನ್ನ ಪ್ರಕಟನೆಯಲ್ಲಿ ತಿಳಿಸಿತ್ತು. ಇದರ ಮುಂದುವರೆದ ಭಾಗವೆಂಬಂತೆ ಕಳೆದ ಶುಕ್ರವಾರ ೧೨ ದಶಲಕ್ಷ ಷೇರುಗಳನ್ನು ಮಾರಾಟ ಮಾಡಲಾಗಿದೆ. ಬೆಜೋಸ್ ಅವರು ತೆರಿಗೆ ಪಾವತಿಯಲ್ಲಿ ವಿನಾಯಿತಿಗಾಗಿ ಕಳೆದ ವರ್ಷ ವಾಷಿಂಗ್ಟನ್‌ನಿಂದ ತನ್ನ ವಾಸ್ತವ್ಯವನ್ನು ಮಿಯಾಮಿ (ಫ್ಲೊರಿಡಾ)ಗೆ ಬದಲಾಯಿಸಿಕೊಂಡಿದ್ದಾರೆ. ಷೇರುಗಳ ಮಾರಾಟ ಅಥವಾ ಇತರ ದೀರ್ಘಾವಧಿಯ ಹೂಡಿಕೆಗಳಿಂದ $೨೫೦,೦೦೦ ಗಿಂತ ಹೆಚ್ಚಿನ ಲಾಭಕ್ಕೆ ವಾಷಿಂಗ್ಟನ್ ರಾಜ್ಯದಲ್ಲಿ ೭% ತೆರಿಗೆ ವಿಧಿಸಲಾಗುತ್ತದೆ. ಆದರೆ ಫ್ಲೋರಿಡಾವು ಆದಾಯ ಅಥವಾ ಬಂಡವಾಳ ಲಾಭಗಳ ಮೇಲೆ ರಾಜ್ಯ ತೆರಿಗೆಗಳನ್ನು ಹೊಂದಿಲ್ಲ. ಇದೇ ಕಾರಣಕ್ಕಾಗಿ ಬೆಜೋಸ್ ಅವರು ಫ್ಲೊರಿಡಾಗೆ ತಮ್ಮ ವಾಸ್ತವ್ಯವನ್ನು ಬದಲಾಯಿಸಿದ್ದರು.