೪ ತಿಂಗಳು ಈರುಳ್ಳಿ ತಿನ್ನದಿದ್ದರೆ ಏನೂ ಆಗಲ್ಲ

ಮುಂಬೈ,ಆ.೨೨- ದೇಶದಲ್ಲಿ ಈರುಳ್ಳಿ ಬೆಲೆ ಹೆಚ್ಚಳಕ್ಕೆ ಕಡಿವಾಣ ಹಾಕಲು ರಪ್ತು ಮೇಲೆ ಶೇಕಡಾ ೪೦ ರಷ್ಟು ತೆರಿಗೆ ವಿಧಿಸಿರುವ ಕೇಂದ್ರ ಸರ್ಕಾರದ ಕ್ರಮದ ವಿರುದ್ದ ರೈತರು,ವ್ಯಾಪಾರಿಗಳು ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಮಹಾರಾಷ್ಟ್ರದ ಸಚಿವರೊಬ್ಬರು ಜನರು ೨ ರಿಂದ ೪ ತಿಂಗಳು ಈರುಳ್ಳಿ ತಿನ್ನದಿದ್ದರೆ ಏನೂ ಆಗುವುದಿಲ್ಲ ಎನ್ನುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.
೧೦ ಲಕ್ಷ ರೂಪಾಯಿ ಮೌಲ್ಯದ ವಾಹನ ಬಳಸುವ ಮಂದಿ, ಚಿಲ್ಲರೆ ದರಕ್ಕಿಂತ ೧೦ ಅಥವಾ ೨೦ ರೂಪಾಯಿ ಹೆಚ್ಚಿನ ದರದಲ್ಲಿ ಈರುಳ್ಳಿ ಖರೀದಿಸಲು ಯಾವುದೇ ತೊಂದರೆ ಇಲ್ಲ. ಈರುಳ್ಳಿ ಖರೀದಿಸಲು ಸಾಧ್ಯವಾಗದ ಜನರು ಎರಡು-ನಾಲ್ಕು ತಿಂಗಳ ಕಾಲ ಈರುಳ್ಳಿ ತಿನ್ನದಿದ್ದರೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಮಹಾರಾಷ್ಟ್ರದ ಲೋಕೋಪಯೋಗಿ ಸಚಿವ ದಾದಾ ಭೂಸೆ ಹೇಳಿದ್ದಾರೆ.
ಎಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆಯ ಜಾಹಿರಾತಿನಲ್ಲಿ ಈರುಳ್ಳಿ ಹರಾಜನ್ನು ಅನಿರ್ದಿಷ್ಟಾವಧಿಗೆ ಮುಚ್ಚಲು ವ್ಯಾಪಾರಿಗಳು ನಿರ್ಧರಿಸಿದ ಬೆನ್ನಲ್ಲೇ ಸಚಿವರು ಈ ಹೇಳಿಕೆ ನೀಡಿದ್ದಾರೆ.
ಈರುಳ್ಳಿ ರಫ್ತು ಸುಂಕವನ್ನು ವಿಧಿಸುವ ನಿರ್ಧಾರವನ್ನು ಸರಿಯಾದ ಸಮನ್ವಯದಿಂದ ತೆಗೆದುಕೊಳ್ಳಬೇಕಿತ್ತು ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರ ಆಗಸ್ಟ್ ೧೯ ರಂದು ಈರುಳ್ಳಿ ರಫ್ತಿನ ಮೇಲೆ ಶೇಕಡಾ ೪೦ ರಷ್ಟು ಸುಂಕ ವಿಧಿಸಿದ್ದು, ಬೆಲೆ ಏರಿಕೆಯನ್ನು ತಡೆಯಲು ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಪೂರೈಕೆ ಖಾತರಿ ಪಡಿಸಿಕೊಳ್ಳಲು ಡಿಸೆಂಬರ್ ೩೧ರ ವರೆಗೆ ಈರುಳ್ಳಿ ಮೇಲೆ ಶೇ. ೪೦ ರಫ್ತು ಸುಂಕವನ್ನು ಹಣಕಾಸು ಸಚಿವಾಲಯ ಅಧಿಸೂಚನೆಯ ಮೂಲಕ ವಿಧಿಸಿದೆ.
“ಕೆಲವೊಮ್ಮೆ ಈರುಳ್ಳಿ ಪ್ರತಿ ಕ್ವಿಂಟಲ್‌ಗೆ ೨೦೦ ರೂಪಾಯಿ ಇದ್ದರೆ ಕೆಲವೊಮ್ಮೆ ಅದು ಕ್ವಿಂಟಲ್‌ಗೆ ೨,೦೦೦ ರೂಪಾಯಿ ತಲುಪುತ್ತದೆ ಇಂತಹ ಸಮಯದಲ್ಲಿ ಚರ್ಚೆ ನಡೆಸಿ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಬಹುದು” ಎಂದು ಭೂಸೆ ಹೇಳಿದ್ದಾರೆ
ಕೇಂದ್ರ ಸರ್ಕಾರ ನಿರ್ಧಾರವನ್ನು ಹಿಂತೆಗೆದುಕೊಳ್ಳುವವರೆಗೆ ಅನಿರ್ದಿಷ್ಟಾವಧಿಯವರೆಗೆ ಈರುಳ್ಳಿ ಹರಾಜಿನಲ್ಲಿ ಪಾಲ್ಗೊಳ್ಳದಂತೆ ನಾಸಿಕ್ ಜಿಲ್ಲಾ ಈರುಳ್ಳಿ ವರ್ತಕರ ಸಂಘ ಕರೆ ನೀಡಿದೆ ಎಂದು ಮೂಲಗಳು ತಿಳಿಸಿವೆ.