೪ ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ

ಜಿಗಿದ ವ್ಯಕ್ತಿ ಗಂಭೀರ
ನಗರದ ಕೋರಮಂಗಲದ ಪೋರ್ ಮಾಲ್ ಎದುರು ಗಡೆಯ ನೆಕ್ಸ್ಟಾ ಶೋ ರೂಮ್ ಕಲ್ಟ್‌ಫಿಟ್ ಕಟ್ಟಡದ ಮೇಲ್ಭಾಗದಲ್ಲಿ ಇಂದು ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಕಿಯನ್ನು ನಂದಿಸುತ್ತಿರುವ ಅಗ್ನಿಶಾಮಕದಳದ ಸಿಬ್ಬಂದಿ.

ಬೆಂಗಳೂರು,ಅ.೧೮-ಕೋರಮಂಗಲದ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿ ವ್ಯಕ್ತಿಯೊಬ್ಬ ಜೀವ ಉಳಿಸಿಕೊಳ್ಳಲು ಕಟ್ಟಡದ ಟೆರಿಸ್‌ನಿಂದ ಜಿಗಿದಿರುವ ಆಘಾತಕಾರಿ ಘಟನೆ ನಡೆದಿದೆ.ಕೋರಮಂಗಲದ ಬಹು ಮಹಡಿ ಕಟ್ಟಡದ ನಾಲ್ಕನೇ ಮಹಡಿಯಲ್ಲಿದ್ದ ಮಡ್ ಪೈಪ್ ಪಬ್ ನಲ್ಲಿ ಬೆಳಿಗ್ಗೆ ೧೧.೪೦ ರ ವೇಳೆ ಬೆಂಕಿ ಕಾಣಿಸಿಕೊಂಡು ಬೆಂಕಿ ಹೊತ್ತಿಕೊಂಡು ಧಗಧಗನೆ ಉರಿದಿದೆ.ಬೆಂಕಿಯು ಪಕ್ಕದ ಕಟ್ಟಡಗಳಿಗೆ ಆವರಿಸ ತೊಡಗಿ ಸುಟ್ಟ ವಸ್ತುಗಳು ಸ್ಫೋಟಗೊಂಡು ಕಳೆಗೆ ಬಿದ್ದು ಐದಾರು ದ್ವಿಚಕ್ರ ವಾಹನಗಳು ಸುಟ್ಟುಹೋಗಿವೆ.ಈ ವೇಳೆ ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳಲು ವ್ಯಕ್ತಿಯೊಬ್ಬ ಕೊನೆಯ ಮಹಡಿಯಿಂದ ಕೆಳಗೆ ಜಿಗಿದಿದ್ದಾನೆ. ಸ್ಥಳೀಯರು ಇದರ ವೀಡಿಯೋ ಚಿತ್ರೀಕರಿಸಿದ್ದಾರೆ.
ನಾಲ್ಕನೇ ಮಹಡಿಯಿಂದ ಜಿಗಿದು ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು ಆತನ ಸ್ಥಿತಿ ಚಿಂತಾಜನಕವಾಗಿದೆ.
ಸಿಲಿಂಡರ್ ಬ್ಲಾಸ್ಟ್ನಿಂದ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಬಿಲ್ಡಿಂಗ್‌ನ ಮೇಲೆ ಇರುವ ಮಳಿಗೆ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಅಗ್ನಿ ಅವಘಡವಾದ ಬಳಿಕ ೬ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿವೆ.ಬೆಂಕಿ ನಿಯಂತ್ರಿಸಲು ಅಗ್ನಿಶಾಮಕ ದಳದವರು ಹರಸಾಹಸಪಟ್ಟರು.
ಕಟ್ಟಡದ ಮೇಲ್ಬಾಗದಲ್ಲಿ ೫-೬ ಸಿಲಿಂಡರ್‌ಗಳನ್ನು ಇಡಲಾಗಿತ್ತು. ಬಿಲ್ಡಿಂಗ್ ಹತ್ತಿರವೂ ಸುಳಿಯಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿತ್ತು ಸ್ಥಳೀಯರು ಅಕ್ಕ-ಪಕ್ಕದ ಬಿಲ್ಡಿಂಗ್‌ಗೆ ಬೆಂಕಿ ಆವರಿಸುವ ಆತಂಕದಲ್ಲಿದ್ದು ಅಗ್ನಿಶಾಮಕ ಸಿಬ್ಬಂದಿ ಸತತ ಪರಿಶ್ರಮದಿಂದ ಬೆಂಕಿನಂದಿಸಲಾಗಿದೆ.
ಪಬ್ ನ ಕಟ್ಟಡದಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಆದರೆ ಅಪಾರ ನಷ್ಟ ಉಂಟಾಗಿದ್ದು,ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿರುವ ಕೋರಮಂಗಲ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.