೪೫ ಬ್ಯಾಗ್‌ಗಳಲ್ಲಿ ಮಾನವನ ಅವಶೇಷಗಳು ಪತ್ತೆ

ಗ್ವಾಡಲಜಾರಾ (ಮೆಕ್ಸಿಕೊ), ಜೂ.೨- ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಮೆಕ್ಸಿಕನ್ ಪೊಲೀಸ್ ಅಧಿಕಾರಿಗಳು ಪಶ್ಚಿಮ ನಗರದ ಗ್ವಾಡಲಜಾರಾ ಹೊರಗಿನ ಕಂದರದಲ್ಲಿ ಮಾನವನ ಕಳೇಬರ ಅವಶೇಷಗಳನ್ನು ಹೊಂದಿರುವ ಸುಮಾರು ೪೫ ಚೀಲಗಳನ್ನು ಪತ್ತೆಹಚ್ಚಿದ್ದಾರೆ. ಸದ್ಯ ಈ ಬೆಳವಣಿಗೆ ಇಡೀ ಮೆಕ್ಸಿಕೊ ದೇಶವನ್ನೇ ಬೆಚ್ಚಿಬೀಳಿಸಿದ್ದು, ತನಿಖೆ ಮತ್ತಷ್ಟು ತೀವ್ರಗೊಂಡಿದೆ.
ಕಳೆದೊಂದು ವಾರದಿಂದ ಕಾಲ್‌ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಏಳು ಮಂದಿ ಸಿಬ್ಬಂದಿ ನಾಪತ್ತೆಯಾಗಿದ್ದು, ಅವರನ್ನು ಸದ್ಯ ಪೊಲೀಸರು ಹುಡುಕಾಡುತ್ತಿದ್ದಾರೆ. ಸದ್ಯ ಈ ತನಿಖೆ ನಡೆಯುತ್ತಿರುವುವಂತೆ ಗ್ವಾಡಲಜಾರಾ ಹೊರವಲಯದ ಕಂದರದಲ್ಲಿ ಸುಮಾರು ೪೫ ಬ್ಯಾಗ್‌ಗಳಲ್ಲಿ ಮಾನವನ ಅವಶೇಷಗಳನ್ನು ತುಂಬಿಕೊಂಡಿರುವ ಬ್ಯಾಗ್‌ಗಳನ್ನು ಪತ್ತೆಹಚ್ಚಲಾಗಿದೆ. ಸದ್ಯ ನಾಪತ್ತೆಯಾಗಿರುವ ಕಾಲ್‌ಸೆಂಟರ್ ಸಿಬ್ಬಂದಿಯ ಮೃತದೇಹಗಳಾಗಿವೆ ಎನ್ನಲಾಗಿದೆ. ಪುರುಷರು ಮತ್ತು ಮಹಿಳೆಯರ ಅವಶೇಷಗಳು ಇವುಗಳಲ್ಲಿ ಸೇರಿವೆ. ಆದರೆ ವಿಷಮ ಪರಿಸ್ಥಿತಿ ಮೃತದೇಹಗಳ ಹುಡುಕಾಟಕ್ಕೆ ಕಂಟಕ ತಂದಿದೆ. ಕಂದರದಲ್ಲಿ ಕಷ್ಟಕರವಾದ ಭೂಪ್ರದೇಶ ಮತ್ತು ಕಳಪೆ ಬೆಳಕಿನಿಂದಾಗಿ ಹುಡುಕಾಟವು ಹಲವಾರು ದಿನಗಳವರೆಗೆ ಮುಂದುವರಿಯುವ ನಿರೀಕ್ಷೆಯಿದೆ ಎನ್ನಲಾಗಿದೆ. ಅಗ್ನಿಶಾಮಕ ದಳ ಮತ್ತು ನಾಗರಿಕ ರಕ್ಷಣಾ ಸಿಬ್ಬಂದಿ ಮತ್ತು ಹೆಲಿಕಾಪ್ಟರ್ ಸಿಬ್ಬಂದಿಯೊಂದಿಗೆ ಅವಶೇಷಗಳನ್ನು ಹೊರತೆಗೆಯಲಾಗಿದ್ದು, ಸದ್ಯ ಕಾರ್ಯಾಚರಣೆ ಮುಂದುವರೆದಿದೆ. ಇನ್ನು ಮೃತದೇಹಗಳ ಅವಶೇಷ ಹೊಂದಿರುವ ಮೊದಲ ಚೀಲ ಮಂಗಳವಾರ ಪತ್ತೆಯಾಗಿತ್ತು. ಆದರೆ ಕಷ್ಟಕರವಾದ ಭೂಪ್ರದೇಶ ಮತ್ತು ಸೂರ್ಯನ ಬೆಳಕಿನ ಕೊರತೆಯಿಂದಾಗಿ, ತನಿಖೆ ಬುಧವಾರ ಮತ್ತೆ ಪುನರಾರಂಭವಾಯಿತು ಮತ್ತು ಎಲ್ಲಾ ಅವಶೇಷಗಳು ಪತ್ತೆಯಾಗುವವರೆಗೆ ಮುಂದುವರಿಯುತ್ತದೆ. ಮೃತ ದೇಹಗಳ ಸಂಖ್ಯೆ, ಅವರು ಯಾರು ಮತ್ತು ಅವರ ಸಾವಿಗೆ ಕಾರಣಗಳನ್ನು ನಿರ್ಧರಿಸುವ ಕೆಲಸವನ್ನು ಮುಂದುವರಿಸಲಾಗುವುದು ಎಂದು ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ.