೪೩ ಸಾವಿರ ಪೌರಕಾರ್ಮಿಕರ ಸೇವೆ ಖಾಯಂ : ಸಿ.ಎಂ. ಭರವಸೆ

ಬೆಂಗಳೂರು, ಸೆ. ೨೧- ರಾಜ್ಯದಲ್ಲಿರುವ ಒಟ್ಟು ೪೩ ಸಾವಿರ ಪೌರ ಕಾರ್ಮಿಕರ ಸೇವೆ ಖಾಯಂ ನೇಮಕಾತಿಗೆ ಸೂಕ್ತ ಕ್ರಮಕೈಗೊಂಡು ಐಪಿಡಿ ಸಾಲಪ್ಪ ವರದಿ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜಬೊಮ್ಮೊಯಿ ಹೇಳಿದ್ದಾರೆ.
ಮುಖ್ಯಮಂತ್ರಿಗಳ ನಿವಾಸದ ಬಳಿ ಇಂದು ಎಲ್ಲ ಪೌರ ಕಾರ್ಮಿಕರು ಜಮಾಯಿಸಿ, ಖಾಯಮಾತಿಗೆ ಆಗ್ರಹಿಸಿ, ಪ್ರತಿಭಟನೆ ನಡೆಸಿದ ಬೆನ್ನಲ್ಲೆ ಮುಖ್ಯಮಂತ್ರಿಗಳು ಟ್ವೀಟ್ ಮಾಡಿ, ಪೌರ ಕಾರ್ಮಿಕರಿಗೆ ಸಂಬಂಧಿಸಿದಂತೆ ಐಪಿಡಿ ಸಾಲಪ್ಪ ಅವರು ನೀಡಿರುವ ವರದಿ ಅನುಷ್ಟಾನಕ್ಕೆ ಸರ್ಕಾರ ಬದ್ಧವಾಗಿದೆ. ಒಟ್ಟು ಇರುವ ೪೩ ಸಾವಿರ ಪೌರ ಕಾರ್ಮಿಕರನ್ನು ಖಾಯಂ ಮಾಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.ಇಂದು ಬೆಳಗ್ಗೆಯೇ ಪೌರ ಕಾರ್ಮಿಕರು ಮುಖ್ಯಮಂತ್ರಿಗಳ ನಿವಾಸದ ಬಳಿ ಪ್ರತಿಭಟನಾ ಧರಣಿ ನಡೆಸಿದ್ದರು. ರಾಜ್ಯ ಸರ್ಕಾರ ಬಿಬಿಎಂಪಿಯಲ್ಲಿ ೮ ಸಾವಿರ ಪೌರ ಕಾರ್ಮಿಕರನ್ನು ಖಾಯಂ ಮಾಡಿಕೊಳ್ಳಲು ಅವಕಾಶವಿದ್ದರು ಕೇವಲ ಒಂದು ಸಾವಿರ ಪೌಕ ಕಾರ್ಮಿಕರನ್ನು ಮಾತ್ರ ಖಾಯಂ ಮಾಡಿದೆ. ಉಳಿದ ೭ ಸಾವಿರ ಪೌರ ಕಾರ್ಮಿಕರನ್ನು ಖಾಯಂ ಮಾಡಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.ಮುಖ್ಯಮಂತ್ರಿಗಳು ಆರ್‌ಟಿ ನಗರದ ತಮ್ಮ ನಿವಾಸದಿಂದ ಹೊರ ಬಂದಾಗ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದ ಪೌರ ಕಾರ್ಮಿಕರು, ಪೌರ ಕಾರ್ಮಿಕರಿಗೆ ಅನ್ಯಾಯವಾಗಿದೆ ಎಂಬ ಘೋಷಣೆಗಳನ್ನು ಕೂಗಿದ್ದರು.