೪೦ – ೫೦ ದಶಲಕ್ಷ ಕೋವಿಶೀಲ್ಡ್ ಲಸಿಕೆಗೆ ಅವಕಾಶ

ನವದೆಹಲಿ,ಡಿ.೨೯- ಪುಣೆ ಮೂಲದ ಭಾರತೀಯ ಸೀರಂ ಸಂಸ್ಥೆ ಸಿದ್ಧಪಡಿಸಿರುವ ಕೋವಿ ಶೀಲ್ಡ್ ಲಸಿಕೆ ಪ್ರಾಥಮಿಕ ಹಂತದಲ್ಲಿ ೪೦ ರಿಂದ ೫೦ ದಶಲಕ್ಷ ಡೋಸ್‌ಗಳನ್ನು ಪಡೆಯಲು ಅವಕಾಶವಿದೆ. ಆದರೆ, ಈ ಲಸಿಕೆಗಳನ್ನು ರಫ್ತು ಮಾಡಲು ವಿಶ್ವ ಆರೋಗ್ಯ ಸಂಸ್ಥೆಯ ಒಪ್ಪಿಗೆ ಅಗತ್ಯವಿರುವುದರಿಂದ ಇದಕ್ಕಾಗಿ ಒಂದು ತಿಂಗಳುಗಳ ಕಾಲ ಬೇಕಾಗುತ್ತದೆ ಎಂದು ಸೀರಂ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅದರ್ ಪೂನಾವಾಲಾ ತಿಳಿಸಿದ್ದಾರೆ.
ಮುಂದಿನ ಕೆಲವು ದಿನಗಳಲ್ಲಿ ಕೊವ್ಯಾಕ್ಸಿನ್ ತುರ್ತು ಬಳಕೆಗೆ ಅವಕಾಶ ಲಭ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಜನವರಿ ತಿಂಗಳಿನಲ್ಲಿ ದೇಶದಲ್ಲಿ ಕೊರೊನಾ ಸೋಂಕಿಗೆ ಲಸಿಕೆ ವಿತರಿಸುವ ಕಾರ್ಯ ಆರಂಭವಾಗುವ ನಿರೀಕ್ಷೆಯಿದ್ದು, ಶುಭ ಸುದ್ದಿ ಸಿಗಲಿದೆ ಎಂದು ಹೇಳಿದ್ದಾರೆ.
ಲಸಿಕೆ ವಿತರಣೆ ಸಂಬಂಧ ಎಲ್ಲ ಅಂಕಿ-ಅಂಶಗಳನ್ನು ಸಲ್ಲಿಸಲಾಗಿದ್ದು, ಇದರ ಪ್ರಕ್ರಿಯೆಗೆ ಇನ್ನಷ್ಟು ಕಾಲಾವಕಾಶ ಬೇಕಾಗಿದೆ. ಬ್ರಿಟನ್ ಮತ್ತು ಭಾರತದಲ್ಲಿ ಏಕ ಕಾಲಕ್ಕೆ ಒಪ್ಪಿಗೆ ದೊರೆಯಲಿದೆ.
ಮೂಲಗಳ ಪ್ರಕಾರ ಸೀರಂ ಸಂಸ್ಥೆ ಸಲ್ಲಿಸಿರುವ ಅಂಕಿ-ಅಂಶಗಳು ತೃಪ್ತಿದಾಯಕವಾಗಿದೆ. ಕೆಲವೇ ದಿನಗಳಲ್ಲಿ ಈ ಲಸಿಕೆಯನ್ನು ತುರ್ತು ಬಳಕೆಗೆ ಅನುಮೋದನೆ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮಾರ್ಚ್-೨೦೨೧ರ ವೇಳೆಗೆ ೧೦೦ ದಶಲಕ್ಷ ಡೋಸ್‌ಗಳನ್ನು ಉತ್ಪಾದಿಸುವ ಗುರಿ ಹೊಂದಲಾಗಿದೆ. ಪ್ರಕ್ರಿಯೆ ನಂತರ ಜುಲೈನಲ್ಲಿ ೩೦೦ ದಶಲಕ್ಷ ಡೋಸ್‌ಗಳಿಗೆ ತಲುಪಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಲಸಿಕೆಗೆ ಪ್ರಾಧಿಕಾರದಿಂದ ಒಮ್ಮೆ ಅನುಮೋದನೆ ದೊರೆತರೆ ಸರ್ಕಾರ ಈ ಲಸಿಕೆಯನ್ನು ತ್ವರಿತ ಗತಿಯಲ್ಲಿ ವಿತರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ಈ ಲಸಿಕೆಯ ದರ ಖಾಸಗಿ ಮಾರುಕಟ್ಟೆಯಲ್ಲಿ ೧ ಸಾವಿರ ರೂ. ನಿಗದಿ ಮಾಡಲಾಗಿದೆ.
ಆರಂಭದಲ್ಲಿ ಆದ್ಯತೆ ಮೇರೆಗೆ ಮುಂಚೂಣಿ ಕಾರ್ಯಕರ್ತರೂ ಸೇರಿದಂತೆ ೩೦ ಕೋಟಿ ಜನರಿಗೆ ಆಧ್ಯತೆ ಮೇಲೆ ಈ ಲಸಿಕೆ ನೀಡಲಾಗುತ್ತದೆ. ಇದರಲ್ಲಿ ೫೦ ವರ್ಷಗಳ ಮೇಲ್ಪಟ್ಟವರಿಗೂ ಲಸಿಕೆ ವಿತರಿಸಲಾಗುತ್ತದೆ.
ಕೋವಿ ಶೀಲ್ಡ್ ಲಸಿಕೆಗೂ ಬೇಡಿಕೆ ಬಂದಿದ್ದು, ಮೊದಲ ಹಂತದಲ್ಲಿ ೬೦ ಕೋಟಿ ಡೋಸ್‌ಗಳನ್ನು ಸರಬರಾಜು ಮಾಡುವ ಪ್ರಕ್ರಿಯೆಗೆ ಚಾಲನೆ ದೊರೆಯುವ ಸಾಧ್ಯತೆ ಇದೆ ಎಂದು ಹೇಳಿದರು.