೪೦ ಕೋ.ರೂ. ಮೌಲ್ಯದ ಫ್ಯಾನ್ಸಿ ನೋಟು ಸಾಗಾಟ: ಮೂವರ ಸೆರೆ

ಮಂಗಳೂರು, ಎ.೨೫- ಸುಮಾರು 40 ಕೋಟಿ ರೂಪಾಯಿಗಳ ಫ್ಯಾನ್ಸಿ ನೋಟು ಹಾಗೂ ಆರು ಲಕ್ಷ ರೂ. ಅಸಲಿ ಕರೆನ್ಸಿ ಸಹಿತ ಮೂವರು ವಂಚಕರನ್ನು ಬೇಕಲ ಠಾಣಾ ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ.

ಬಂಧಿತರನ್ನು ಮಹಾರಾಷ್ಟ್ರ ಮೂಲದ ಪ್ರಸ್ತುತ ಮಂಗಳೂರಿನಲ್ಲಿ ವಾಸವಾಗಿರುವ ನವಾಬ್ ಮಲಿಕ್ ಸಲೀಮ್ ಶೇಖ್(37), ಪುಣೆಯ ಅಂಶಿಬ್ ಅರ್ಜುನ್(35), ಸೋಲಾಪುರದ ಪರಮೇಶ್ವರ ನರ್ಸುಮ(45) ಎಂದು ಗುರುತಿಸಲಾಗಿದೆ. ಕಾಸರಗೋಡು ಕಡೆಯಿಂದ ಕಾಞ೦ಗಾಡ್ ಗೆ ತೆರಳುತ್ತಿದ್ದಾಗ ಉದುಮದಿಂದ ಆರೋಪಿಗಳನ್ನು ಬಂಧಿಸಲಾಗಿದೆ. ವಾಹನ ತಪಾಸಣೆ ಸಂದರ್ಭದಲ್ಲಿ ಈ ದಾರಿಯಾಗಿ ಬಂದ ಇನ್ನೋವಾ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಅಕ್ರಮ ಸಾಗಾಟ ಪತ್ತೆಯಾಗಿದೆ. ಎರಡು ಸಾವಿರ ರೂ. ಮುಖಬೆಲೆಯ ನೋಟುಗಳಿದ್ದವು. ಹೆಚ್ಚಿನವು ಫ್ಯಾನ್ಸಿ ನೋಟುಗಳಾಗಿದ್ದವು. ಅಸಲಿ ಕರೆನ್ಸಿ ನೋಟುಗಳ ಕಟ್ಟುಗಳ ಎರಡೂ ಬದಿಗಳಲ್ಲಿ ಅಸಲಿ ನೋಟುಗಳನಿಟ್ಟು ಮಧ್ಯೆ ಫ್ಯಾನ್ಸಿ ನೋಟುಗಳನ್ನು ಇಡಲಾಗಿತ್ತು. ಪೆಟ್ಟಿಗೆಗಳಲ್ಲಿ ಹಾಗೂ ಗೋಣಿ ಚೀಲಗಳಲ್ಲಿ ತುಂಬಿಸಿ ಈ ನೋಟುಗಳನ್ನು ಸಾಗಿಸಲಾಗುತ್ತಿತ್ತು.

ಸಿನಿಮಾ ಚಿತ್ರೀಕರಣಕ್ಕೆ ಈ ನೋಟುಗಳನ್ನುಕೊಂಡೊಯ್ಯುತ್ತಿದ್ದುದಾಗಿ ಬಂಧಿತರು ತಿಳಿಸಿದ್ದಾಗಿ ತಿಳಿದುಬಂದಿದೆ. ಆದರೆ ತನಿಖೆಯಿಂದ ಸಿನಿಮಾದೊಂದಿಗೆ ಇವರಿಗೆ ನಂಟಿಲ್ಲ ಎಂದು ಸಾಬೀತಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇವರ ವಿರುದ್ಧ ಮಂಗಳೂರು ಮತ್ತು ಮುಂಬೈಯಲ್ಲಿ ಮೊಕದ್ದಮೆಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.