ಅಂತರ ಕಾಯ್ದುಕೊಂಡಿದ್ದಕ್ಕೆ ನೇಹಾ ಕೊಲೆ

ಹಂತಕ ತಪ್ಪೊಪ್ಪಿಗೆ

ಹುಬ್ಬಳ್ಳಿ,ಏ.೨೧- ವಿದ್ಯಾರ್ಥಿನಿ ನೇಹಾ ಹಿರೇಮಠ ನನ್ನ ಜೊತೆ ಮಾತನಾಡದೇ ಅಂತರ ಕಾಯ್ದುಕೊಂಡಿದ್ದರಿಂದ ಚಾಕುವಿನಿಂದ ಇರಿದು ಕೊಲೆಗೈದೆ ಎಂದು ಆರೋಪಿ ಫಯಾಜ್ ಬಾಯ್ಬಿಟ್ಟಿದ್ದಾನೆ.
ನಗರದ ವಿದ್ಯಾನಗರದಲ್ಲಿನ ಬಿವಿಬಿ ಕಾಲೇಜು ಆವರಣದಲ್ಲಿ ಎಂಸಿಎ ವಿದ್ಯಾರ್ಥಿನಿ ನೇಹಾಳನ್ನು ಕೊಲೆಗೈದು ಧಾರವಾಡ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿರುವ ಆರೋಪಿ ಫಯಾಜ್ ಸಿಬ್ಬಂದಿ ಎದುರು ಕೊಲೆ ಕಾರಣವನ್ನು ಬಾಯ್ಬಿಟ್ಟಿದ್ದಾನೆ ಎಂದು ಜೈಲಿನ ಮೂಲಗಳು ತಿಳಿಸಿವೆ.ಘಟನೆ ನಡೆಯುವುದಕ್ಕೂ ಮುಂಚೆಯೇ ಕಾಲೇಜು ಬಿಟ್ಟಿದ್ದೆ. ಒಂದು ವಾರದ ಹಿಂದೆ ಕಾಲೇಜ್‌ಗೆ ಹೋಗಿ ನೇಹಾಳನ್ನು ಮಾತನಾಡಿಸಲು ಯತ್ನಿಸಿದೆ. ಆದರೆ ಅವಳು (ನೇಹಾ) ನಿನ್ನ ಜೊತೆ ಮಾತನಾಡಲು ಇಷ್ಟ ಇಲ್ಲ ಎಂದು ಅಂತರ ಕಾಯ್ದುಕೊಂಡು ಹೊರಟು ಹೋದಳು.
ಏಪ್ರಿಲ್ ೧೮ ರಂದು ಅವಳು ಪರೀಕ್ಷೆ ಬರೆಯಲು ಬಿವಿಬಿ ಕಾಲೇಜಿಗೆ ಬಂದಿದ್ದಳು. ನಾನು (ಫಯಾಜ್) ಮತ್ತೆ ಅಂದು ಕಾಲೇಜಿಗೆ ಹೋದೆ. ಪರೀಕ್ಷೆ ಮುಗಿಯುವವರೆಗೂ ಕಾಯ್ದೆ. ಪರೀಕ್ಷೆ ಮುಗಿದ ಬಳಿಕ ಹೊರಗೆ ಬಂದ ಅವಳನ್ನು ಮಾತನಾಡಿಸಲು ಯತ್ನಿಸಿದೆ.ಆದರೆ ಅವಳು ಮಾತಾಡಲ್ಲ ಅಂದಾಗ ರೊಚ್ಚಿಗೆದ್ದು ಅವಳಿಗೆ ಚಾಕುವಿನಿಂದ ಹತ್ತು ಬಾರಿ ಚುಚ್ಚಿದೆ. ಅವಳಿಗೆ ಚಾಕು ಹಾಕುವ ವೇಳೆ ನನ್ನ ಎರಡು ಕೈ ಬೆರಳುಗಳಿಗೆ, ಕಾಲಿಗೂ ಗಾಯವಾಗಿದೆ. ಏನಾಗಿದೆ ಅನ್ನೋದು ಗೊತ್ತಿಲ್ಲ, ಅವಳು ಮಾತಾಡಲ್ಲ ಅಂದಳು ನಾನು ಚಾಕು ಹಾಕಿದ್ದೇನೆ” ಎಂದು ಕಾರಾಗೃಹ ಸಿಬ್ಬಂದಿ ಎದುರು ಫಯಾಜ್ ಹೇಳಿದ್ದಾನೆ.
ಈ ನಡುವೆ ನೇಹಾಳ ಕುರಿತು ನೇಹಾ ಮನೆಯ ಮುಂಭಾಗದಲ್ಲಿರುವ ಮುಸ್ಲಿಂ ಕುಟುಂಬ ಮಾತನಾಡಿ, ಹಿಂದೂ ಮುಸ್ಲಿಂ ಬೇಧ ಬಾವ ಇಲ್ಲದೆ ನಾವಿದ್ದೇವೆ. ನೇಹಾ ತಾಯಿ ನಮ್ಮ ಜೊತೆ ವಾಕಿಂಗ್ ಬರುತ್ತಾ ಇದ್ದರು. ನೇಹಾ ನಮ್ಮ ಜೊತೆ ಬಹಳ ಚೆನ್ನಾಗಿ ಮಾತಾಡುತ್ತಿದ್ದರು. ಅವರ ಮನೆಯಲ್ಲಿ ಹಬ್ಬ ಇದ್ದರೆ ನಾವು ಹೋಗುತಿದ್ವಿ. ನಮ್ಮ ಮನೆಯಲ್ಲಿ ಹಬ್ಬ ಇದ್ದರೆ ಅವರು ಬರುತ್ತಿದ್ದರು. ಎಲ್ಲರೊಂದಿಗೆ ನೇಹಾ ಚೆನ್ನಾಗಿದ್ದಳು ಎಂದು ಹೇಳಿದರು.
ಲವ್ ಆ ತರಹ ಏನೂ ಇರಲಿಲ್ಲ, ಒಳ್ಳೆ ಹುಡಗಿ. ನೇಹಾ ಕೊಲೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.