೪೦೦ಕ್ಕೂ ಹೆಚ್ಚು ಸ್ಥಾನ: ಮೋದಿ ವಿಶ್ವಾಸ

ನವದೆಹಲಿ,ಮೇ.೨೧- ದೇಶದಲ್ಲಿ ಲೋಕಸಭೆಯ ಐದು ಹಂತಗಳ ಮತದಾನ ಪೂರ್ಣಗೊಂಡಿದ್ದು ಪ್ರತಿ ಹಂತದಿಂದ ಹಂತಕ್ಕೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಬಲಗೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕೇಂದ್ರದಲ್ಲಿ ಬಲಿಷ್ಠ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಬೇಕು ಎಂದು ಜನರು ನಿರ್ಧರಿಸಿದ್ದಾರೆ. ಈ ಬಾರಿಯೂ ೪೦೦ಕ್ಕೂ ಹೆಚ್ಚು ಸ್ಥಾನಗಳಲ್ಲಿ ಎನ್ ಡಿಎ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು ಬಿಜೆಪಿ ನೇತೃತ್ವದ ಮೈತ್ರಿಕೂಟದ ಪರವಾಗಿ ಜನರ ಬೆಂಬಲದ ಅಲೆ “ಬಲಗೊಳ್ಳುತ್ತಿದೆ” ಲೋಕಸಭೆ ಚುನಾವಣೆಯ ಐದನೇ ಹಂತದಲ್ಲಿ ಮತ ಚಲಾಯಿಸಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟವು ಯಾವುದೇ ರೀತಿಯ ಮತಬ್ಯಾಂಕ್ ರಾಜಕೀಯ ಮಾಡುತ್ತಿದೆ. ಇದನ್ನು ಜನರು ಅರಿತಿದ್ದಾರೆ. ಅವರ ತುಷ್ಠೀಕರಣ ರಾಜಕಾರಣಕ್ಕೆ ಜನ ಸೊಪ್ಪು ಹಾಕುವುದಿಲ್ಲ ಎಂದಿದ್ದಾರೆ.
ಎನ್‌ಡಿಎ ನೇತೃತ್ವದ ಮೈತ್ರಿಕೂಟಕ್ಕೆ ದೇಶದ ಜನರಿಂದ ಸಿಗುತ್ತಿರುವ ಬೆಂಬಲಕ್ಕೆ ಇಂಡಿಯಾ ಮೈತ್ರಿಕೂಟದ ನಾಯಕರು ಹತಾಶೆಗೆ ಒಳಗಾಗಿದ್ದಾರೆ. ಹೀಗಾಗಿ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಜನರಿಗೆ ಕೃತಜ್ಞತೆ:
ಐದನೇ ಹಂತದ ಮತದಾನದಲ್ಲಿ ಜಮ್ಮು ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದಲ್ಲಿ ತನ್ನ ಅತಿ ಹೆಚ್ಚು ಮತದಾನ ದಾಖಲಾಗಿದೆ ಇದು ಹರ್ಷದ ಸಂಗತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಒಂದು ಕಾಲದಲ್ಲಿ ಉಗ್ರಗಾಮಿಗಳ ಅಟ್ಟಹಾಸ ಹೊಂದಿತ್ತು.ಅದಕ್ಕೆ ಮುಕ್ತಿ ನೀಡಲಾಗಿದೆ. ನಿನ್ನೆ ನಡೆದ ಮತದಾನ ಹಿಂಸಾಚಾರ ಮುಕ್ತ ಮತದಾನದ ದಿನದಂದು ೫೯ ಪ್ರತಿಶತದಷ್ಟು ಮತದಾನ ದಾಖಲಾಗಿದೆ ಇದು ಹರ್ಷದ ಸಂಗತಿ ಎಂದಿದ್ದಾರೆ.
ಮತದಾನದ ಹಕ್ಕನ್ನು ಚಲಾಯಿಸಲು ಬಾರಾಮುಲ್ಲಾದ ಮತದಾನ ಕೇಂದ್ರಗಳು ಜನರಿಂದ ಗಿಜಿಗುಡುತ್ತಿದ್ದವು. “ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಶಕ್ತಿ ತುಂಬುವ ಕೆಲಸ ಮಾಡಿದ ಸಹೋದರಿಯರು ಮತ್ತು ಸಹೋದರರಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.