೪ನೇ ದಿನ ಅಮರನಾಥ ಯಾತ್ರೆ ಸ್ಥಗಿತ

ಶ್ರೀನಗರ, ಜೂ.೧೧- ಭಾರೀ ಮಳೆಯಿಂದಾಗಿ ಹಲವೆಡೆ ಭೂಕುಸಿತ ಉಂಟಾಗಿದ್ದು, ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದ್ದು, ಸತತ ನಾಲ್ಕನೇ ದಿನವೂ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ೧೫,೦೦೦ಕ್ಕೂ ಹೆಚ್ಚು ಯಾತ್ರಾರ್ಥಿಗಳು ಜಮ್ಮು ಮತ್ತು ಇತರ ಸ್ಥಳಗಳಲ್ಲಿ ಸಿಲುಕಿಕೊಂಡಿದ್ದಾರೆ.
ಭಾರೀ ಮಳೆಯಿಂದಾಗಿ ರಾಂಬನ್ ಜಿಲ್ಲೆಯಲ್ಲಿ ಭೂಕುಸಿತದ ಹೆಚ್ಚಳವು ಹೆದ್ದಾರಿಯನ್ನು ಮುಚ್ಚಲು ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮುವಿನಿಂದ ಯಾತ್ರೆ ಇನ್ನೂ ಪುನರಾರಂಭಗೊಂಡಿಲ್ಲ. ಜಮ್ಮು ಶಿಬಿರದಿಂದ ಕಾಶ್ಮೀರಕ್ಕೆ ತೆರಳಲು ಯಾವುದೇ ಹೊಸ ತಂಡಕ್ಕೆ ಅವಕಾಶ ನೀಡಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ದಿನವಿಡೀ ಸಂಚಾರ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿಗಳ ಕಾರ್ಯಾಚರಣೆಯಿಂದಾಗಿ ಪ್ರಯತ್ನದ ಫಲವಾಗಿ ಹದಗೆಟ್ಟ ರಸ್ತೆಯ ಸ್ಥಿತಿ ಕೊಂಚ ಮಟ್ಟಿಗೆ ಸುಧಾರಿಸಿದೆ ಎನ್ನಲಾಗಿದೆ
ಆದಾಗ್ಯೂ, ಸಂಪೂರ್ಣವಾಗಿ ರಸ್ತೆ ರಿಪೇರಿ ಆಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಮೂಲಗಳು ತಿಳಿಸಿವೆ.ಮಂಗಳವಾರವೂ ಹೆದ್ದಾರಿಯನ್ನು ಮುಚ್ಚಲಾಗಿದೆ ಎಂದು ಸಂಚಾರ ಪ್ರಾಧಿಕಾರ ಸೋಮವಾರ ರಾತ್ರಿ ಪ್ರಕಟಿಸಿದೆ.