೩.೪೧೯ ಕೋಟಿ ಬಿಲ್ ಶಾಕ್‌ಗೆ ಆಸ್ಪತ್ರೆ ಸೇರಿದ ಗ್ರಾಹಕ

ಭೂಪಾಲ್,ಜು.೨೭- ಸಾಮಾನ್ಯವಾಗಿ ಮಧ್ಯಮ ವರ್ಗದ ಮನೆಗಳಲ್ಲಿ ವಿದ್ಯುತ್ ಬಿಲ್ ಅಬ್ಬಬ್ಬಾ ಎಂದರೆ ಸಾವಿರದಿಂದ ೨ ಸಾವಿರ ರೂ,ವರೆಗೆ ಬರಬಹುದು. ಆದರೆ, ಮಧ್ಯ ಪ್ರದೇಶದಲ್ಲಿ ಗ್ರಾಹಕರೊಬ್ಬರಿಗೆ ವಿದ್ಯುತ್ ಬಿಲ್ ಕಳಿಸಿರುವುದನ್ನು ನೋಡಿದರೆ ಬೆಚ್ಚಿ ಬೀಳುವುದು ಗ್ಯಾರಂಟಿ. ೩,೪೧೯ ಕೋಟಿ ರೂ. ಬಿಲ್ ರವಾನಿಸಿದೆ. ಇದನ್ನು ಗಮನಿಸಿದ ಪ್ರಿಯಾಂಕಗುಪ್ತ ಅವರ ಮಾವ ಜ್ವರ ಬಂದು ಆಸ್ಪತ್ರೆಗೆ ದಾಖಲಾಗಿಬಿಟ್ಟಿದ್ದಾರೆ.ಮಧ್ಯಪ್ರದೇಶ ಸರ್ಕಾರದ ನಡೆಸುತ್ತಿರುವ ವಿದ್ಯುತ್ ಕಂಪನಿಯ ಸಿಬ್ಬಂದಿಯ ಎಡವಟ್ಟಿನಿಂದಾಗಿ ಇಷ್ಟೊಂದು ದೊಡ್ಡ ಮೊತ್ತದ ಬಿಲ್ ರವಾನಿಸಲಾಗಿದೆ. ಸಿಬ್ಬಂದಿಯ ತಪ್ಪಿನಿಂದಾಗಿ ಈ ರೀತಿಯಾಗಿದ್ದು, ೧,೩೦೦ ರೂ. ಬಿಲ್ ಪಡೆಯುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಪ್ರಿಯಾಂಕಗುಪ್ತ ಕುಟುಂಬ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.
ಜುಲೈ ತಿಂಗಳ ಗೃಹ ಬಳಕೆಯ ವಿದ್ಯುತ್ ಬಿಲ್ ಇಷ್ಟೊಂದು ಬೃಹತ್ ಮೊತ್ತದ ಬಿಲ್‌ನ್ನು ನೋಡಿ ತಮ್ಮ ತಂದೆ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪುತ್ರ ಸಂಜೀವ್‌ಕಂಕನೆ ತಿಳಿಸಿದ್ದು ಹೀಗೆ.
ಜು. ೨೦ ರಂದು ಈ ವಿದ್ಯುತ್ ಬಿಲ್ ರವಾನೆಯಾಗಿದೆ. ಈ ಬಿಲ್‌ನ ಬಗ್ಗೆ ಮಧ್ಯಪ್ರದೇಶದ ವಿದ್ಯುತ್ ವಿತರಣಾ ಕಂಪನಿ ಪರಿಶೀಲನೆ ನಡೆಸಿದಾಗ ಈ ಎಡವಟ್ಟು ನಡೆದಿರುವುದು ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಧ್ಯಪ್ರದೇಶದ ವಿದ್ಯುತ್ ಸಚಿವ ಪ್ರದ್ಯುಮಾನ್‌ಸಿಂಗ್ ತೋಮರ್ ಸುದ್ದಿಗಾರರೊಂದಿಗೆ ಮಾತನಾಡಿ ವಿದ್ಯುತ್ ಬಿಲ್‌ನಲ್ಲಿ ಆಗಿರುವ ಎಡವಟ್ಟನ್ನು ಸರಿಪಡಿಸಲಾಗಿದೆ. ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ನಂತರ ಆಗಿರುವ ಎಡವಟ್ಟನ್ನು ಸರಿಪಡಿಸಿ ಅವರು ವಿದ್ಯುತ್ ಬಳಕೆ ಮಾಡಿದ ಬಿಲ್ ವಿದ್ಯುತ್ ಕಂಪನಿ ನೀಡಿದೆ. ಸಿಬ್ಬಂದಿಯ ಎಡವಟ್ಟಿನಿಂದಾಗಿ ಈ ಅಚಾತುರ್ಯವಾಗಿದೆ ಎಂದು ವಿದ್ಯುತ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ನಿತೀನ್ ಮಂಗ್ಲಿಕ್ ತಿಳಿಸಿದ್ದು, ಸಿಬ್ಬಂದಿಯ ವಿರುದ್ಧ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.