೩ ರಾಷ್ಟ್ರಗಳಿಗೆ ಪ್ರಯಾಣ ನಿರ್ಬಂಧಿಸಿದ ಕೆನಡಾ

ಒಟ್ಟಾವಾ (ಕೆನಡಾ), ಡಿ.೧- ಅಪಾಯಕಾರಿ ಎಂದೇ ಬಿಂಬಿಸಲಾಗಿರುವ ಓಮಿಕ್ರಾನ್ ಕೊರೊನಾ ಸೋಂಕಿನ ಬಗ್ಗೆ ಈಗಾಗಲೇ ವಿಶ್ವಾದ್ಯಂತ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದ್ದು, ಹಲವು ರಾಷ್ಟ್ರಗಳು ಒಂದೊಂದಾಗಿ ವಿದೇಶಿಯರ ಪ್ರಯಾಣಕ್ಕೆ ನಿರ್ಬಂಧ ಹೇರುತ್ತಿದೆ. ಕೆನಡಾ ಕೂಡ ಇದೀಗ ಇದೇ ಹಾದಿ ತುಳಿದಿದ್ದು, ಈಜಿಪ್ಟ್, ನೈಜೀರಿಯಾ ಹಾಗೂ ಮಲಾವಿ ಮುಂತಾದ ರಾಷ್ಟ್ರಗಳ ಮೇಲೆ ಪ್ರಯಾಣ ನಿರ್ಬಂಧ ಹೇರಿದೆ.
ಈಗಾಗಲೇ ಕೆನಡಾ ಹಲವು ರಾಷ್ಟ್ರಗಳನ್ನು ತನ್ನ ಪ್ರಯಾಣ ನಿರ್ಬಂಧ ಪಟ್ಟಿಗೆ ಸೇರಿಸಿದೆ. ಇದೀಗ ಈ ಪಟ್ಟಿಗೆ ಹೊಸದಾಗಿ ಈಜಿಪ್ಟ್, ನೈಜೀರಿಯಾ ಹಾಗೂ ಮಲಾವಿ ಮೂರು ರಾಷ್ಟ್ರಗಳನ್ನು ಸೇರಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆನಡಾ ಆರೋಗ್ಯ ಸಚಿವ ಜೀನ್ ವೈವ್ಸ್ ಡಕ್ಲೊಸ್, ಅಮೆರಿಕಾ ಹೊರತುಪಡಿಸಿ ವಿದೇಶಗಳಿಂದ ಕೆನಡಾ ವಿಮಾನ ನಿಲ್ದಾಣಗಳಿಗೆ ಆಗಮಿಸುವವರು ಯಾವುದೇ ವ್ಯಾಕ್ಸಿನ್ ಪಡೆದುಕೊಂಡಿದ್ದರೂ ಪ್ರತಿಯೊಬ್ಬರಿಗೂ ಕೊರೊನಾ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು ಎನ್ನಲಾದ ಓಮಿಕ್ರಾನ್ ಕೊರೊನಾ ಸೋಂಕು ಇದೀಗ ಹಲವು ರಾಷ್ಟ್ರಗಳಲ್ಲಿ ಪತ್ತೆಯಾಗಿದ್ದು, ಎಚ್ಚರಿಕೆಯ ಕರೆಗಂಟೆಯಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರಾಷ್ಟ್ರಗಳು ಕಠಿಣ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡಿದೆ.