೩ ದಿನಗಳಿಗೊಮ್ಮೆ ಗ್ಯಾಸ್ ಪೈಪ್ ಲೈನ್ ಸೋರಿಕೆ

ಬೆಂಗಳೂರು, ಮಾ.೧೮-ಗ್ಯಾಸ್ ಸೋರಿಕೆಯಾದ ಪರಿಣಾಮ ಭೀಕರ ಸ್ಫೋಟ ಸಂಭವಿಸಿ ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕುರಿತು ಪ್ರತಿಕ್ರಿಯಿಸಿದ ಗೇಲ್ ಕಂಪನಿಯೂ, ನಗರದಲ್ಲಿ ಪ್ರತಿ ೩ ದಿನಗಳಿಗೊಮ್ಮೆ ೧ ಗ್ಯಾಸ್ ಪೈಪ್‌ಲೈನ್ ಸೋರಿಕೆಯಾಗುತ್ತಿದೆ ಎಂಬ ಮಾಹಿತಿಯನ್ನು ಗೇಲ್ ಬಹಿರಂಗ ಪಡಿಸಿದೆ.ಗೇಲ್ ಉಪ ಪ್ರಧಾನ ವ್ಯವಸ್ಥಾಪಕ , ಕಾರ್ಯಾಚರಣೆ ಮತ್ತು ನಿರ್ವಹಣೆ ಅಧಿಕಾರಿ ರವಿಕುಮಾರ್ ರೆಬ್ಬಾ ಈ ಕುರಿತು ಕುರಿತು ಮಾಹಿತಿ ನೀಡಿದ್ದು, ಹೆಚ್‌ಎಸ್‌ಆರ್ ಲೇಔಟ್‌ನ ಮನೆಗಳಲ್ಲಿ ಸಂಭವಿಸಿದ ಸ್ಫೋಟಕಕ್ಕೆ ಸಂಬಂಧಿಸಿದಂತೆ, ಮನೆಗಳಿಗೆ ಶೌಚಾಲಯಕ್ಕೆ ಒಳಚರಂಡಿ ಮೂಲಕ ಅನಿಲ ಪ್ರವೇಶಿಸಿದೆ. ಇದರಿಂದ ದುರಂತ ಸಂಭವಿಸಿದೆ. ಇದು ನಗರದಲ್ಲಿ ಎರಡನೇ ಪ್ರಕರಣವಾಗಿದ್ದು, ಮೊದಲ ಘಟನೆ ೨೦೧೮ ರಲ್ಲಿ ಸಿಂಗಸಂದ್ರದಲ್ಲಿ ನಡೆದಿತ್ತು ಎಂದರು.
೨೦೧೬ ರಲ್ಲಿ ಬೆಂಗಳೂರಿನಲ್ಲಿ ಪಿಎನ್‌ಜಿ ಪೂರೈಕೆ ಪ್ರಾರಂಭವಾಗಿದೆ. ದುರಂತಗಳನ್ನು ತಡೆಗಟ್ಟಲು ಸೋರಿಕೆಯನ್ನು ತ್ವರಿತವಾಗಿ ಸರಿಪಡಿಸಲಾಗಿದೆ. ಇದು ನಿಜವಾಗಿಯೂ ಸುರಕ್ಷತೆಯ ಕಾಳಜಿಯಾಗಿದೆ. ಜಲಮಂಡಳಿ ಅಥವಾ ಬೆಸ್ಕಾಂ ಗಳು ಅನುಮತಿಯನ್ನು ಪಡೆಯದೆ ದುರಸ್ತಿ ಕಾರ್ಯಗಳನ್ನು ಕೈಗೊಂಡಿದ್ದಕ್ಕೆ ಹಾನಿಯುಂಟಾಗುತ್ತಿದೆ ಎಂದು ಆರೋಪಿಸಿದರು.
ಗೇಲ್ ಬಿಡ್ಲೂಎಸ್‌ಎಸ್‌ಬಿ ಮತ್ತು ಬೆಸ್ಕಾಂಗೆ ಕಾರ್ಯಾಚರಣೆಯ ವಿಧಾನವನ್ನು ಕಳುಹಿಸಿದೆ. ಅವರು ಕೆಲಸವನ್ನು ಪ್ರಾರಂಭಿಸುವ ಮೊದಲು ಕಂಪನಿಯ ಅನುಮತಿಯನ್ನು ತೆಗೆದುಕೊಳ್ಳಬೇಕು. ದಕ್ಷಿಣ ಬೆಂಗಳೂರು ೧,೬೦೦ ಕಿಮೀ ವ್ಯಾಪಿಸಿರುವ ಪಿಎನ್ ಜಿ ಪೈಪ್‌ಲೈನ್‌ಗಳನ್ನು ಹೊಂದಿದೆ.
ಪೈಪ್‌ಲೈನ್‌ನಿಂದ ಅನಿಲ ಸೋರಿಕೆ ಆರಂಭವಾದಾಗ ಅಧಿಕಾರಿಗಳ ಗಮನಕ್ಕೆ ತರುವ ಬದಲು ಕಾರ್ಮಿಕರು ಹಾನಿಗೊಳಗಾದ ಭಾಗದ ಮೇಲೆ ಮಣ್ಣು ಮುಚ್ಚಿದರು. ಆದರೆ ಇದರಿಂದ ಸೋರಿಕೆ ತಡೆಯಲು ಸಾಧ್ಯವಾಗಲಿಲ್ಲ, ಹೀಗಾಗಿ ಕೆಲಸದ ಸ್ಥಳದ ಸಮೀಪವಿರುವ ಮನೆಯ ಅಡುಗೆಮನೆಗೆ ಅನಿಲ ಹರಡಿತು ಎಂದರು.
ಬೆಂಗಳೂರಿನಂತಹ ನಗರದಲ್ಲಿ ಹಾನಿ ಸಂಭವಿಸುತ್ತಲೇ ಇದೆ ಅದನ್ನು ಸರಿಪಡಿಸಲು ಗೇಲ್ ಸಾಕಷ್ಟು ಸಮರ್ಥವಾಗಿದೆ. ಆದಾಗ್ಯೂ, ಅನಿಲ ಸೋರಿಕೆಯ ಬಗ್ಗೆ ಗೇಲ್‌ಗೆ ತಿಳಿಸಲು ವಿಫಲವಾದ ಬಿಡ್ಲೂಎಸ್‌ಎಸ್‌ಬಿಯ ಅಜ್ಞಾನವೇ ದುರಂತಕ್ಕೆ ಕಾರಣವಾಯಿತು ಎಂದ ಅವರು, ನಗರದಲ್ಲಿ ಪ್ರತಿ ೩ ದಿನಗಳಿಗೊಮ್ಮೆ ೧ ಗ್ಯಾಸ್ ಪೈಪ್‌ಲೈನ್ ಸೋರಿಕೆಯಾಗುತ್ತಿದೆ ಎಂದು ವಿವರಿಸಿದರು.
ಏನಿದು ಪ್ರಕರಣ?
ಗ್ಯಾಸ್ಪೈಪ್‌ಲೈನ್‌ನಿಂದ ಗ್ಯಾಸ್ ಸೋರಿಕೆಯಾದ ಪರಿಣಾಮ ಭೀಕರ ಸ್ಫೋಟ ಸಂಭವಿಸಿ ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೆಚ್.ಎಸ್‌ಆರ್ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು.
ಗುರುವಾರ (ಮಾ.೧೬) ರಂದು ಬೆಳಿಗ್ಗೆ ೯:೩೦ರ ಸುಮಾರಿಗೆ ಇಬ್ಬರು ಅಡುಗೆ ಮಾಡಲು ಬೆಂಕಿ ಹಚ್ಚಿದಾಗ ಎರಡೂ ಮನೆಯೊಳಗೆ ಏಕಾಏಕಿ ದೊಡ್ಡ ಸ್ಪೋಟ ಸಂಭಿಸಿದೆ. ಇದರಿಂದ ಹೆಚ್‌ಎಸ್‌ಆರ್ ಲೇಔಟ್‌ನ ೨ನೇ ಹಂತದ ೨೩ನೇ ಕ್ರಾಸ್ ನಿವಾಸಿಗಳಾದ ಲೈಕಾ ಅಂಜುಂ (೪೬) ಮತ್ತು ಮುಬಾಶಿರಾ (೪೦) ಗಾಯಗೊಂಡವರು. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಲ್ಲಿನ ಮದೀನ ಮಸೀದಿ ಬೆಂಗಳೂರು ಜಲಮಂಡಳಿ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ರಸ್ತೆ ಅಗೆಯಲಾಗಿದೆ. ಈ ವೇಳೆ ಗೇಲ್‌ನ ಗ್ಯಾಸ್ ಪೈಪ್ ಲೈನ್‌ಗೆ ಹಾನಿಯಾಗಿ ಗ್ಯಾಸ್ ಸೋರಿಕೆಯಾಗಿದೆ.