೩ ಕೋಟಿ ಚಿನ್ನ ಪತ್ತೆ ಐಟಿಗೆ ಪೊಲೀಸರ ಪತ್ರ

ಬೆಂಗಳೂರು,ನ.೨೨-ನಗರದಲ್ಲಿ ನಿನ್ನೆ ಸ್ಕೂಟರ್‌ನಲ್ಲಿ ವಶಪಡಿಸಿಕೊಂಡ ೩ ಕೋಟಿ ರೂಪಾಯಿ ಮೌಲ್ಯದ ೬.೫೫ಕೆ.ಜಿ. ಚಿನ್ನಾಭರಣ ಸಾಗಣೆ ಪ್ರಕರಣದ ತನಿಖೆಯನ್ನು ಪಶ್ಚಿಮ ವಿಭಾಗದ ಪೊಲೀಸರು ತೀವ್ರ ಗೊಳಿಸಿದ್ದಾರೆ.
ರಾಜಸ್ಥಾನ ಮೂಲದ ದಲ್ವತ್ ಸಿಂಗ್ ಹಾಗೂ ವಿಕಾಸ್ ಎಂಬುವನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಆದರೆ ಆರೋಪಿಗಳು ಚಿನ್ನಾಭರಣ ಯಾರಿಗೆ ಸೇರಿದ್ದು,ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಈ ಹಿನ್ನೆಲೆಯಲ್ಲಿ ಡಿಸಿಪಿ ಡಾ. ಸಂಜೀವ್ ಎಂ. ಪಾಟೀಲ್ ಅವರು ಖುದ್ದಾಗಿ ಆರೋಪಿಗಳ ವಿಚಾರಣೆ ಮಾಡಲು ಮುಂದಾಗಿದ್ದಾರೆ.
ಚಿನ್ನಕ್ಕೆ ಸರಿಯಾದ ದಾಖಲೆ ಪತ್ರಗಳು ಇಲ್ಲದೇ ಇರುವ ಕಾರಣ ಡಿಸಿಪಿ ಕೋಟ್ಯಂತರ ಮೌಲ್ಯದ ಅಕ್ರಮ ಚಿನ್ನ ಸಾಗಣಿಕೆ ಪ್ರಕರಣದ ಮಾಹಿತಿಯನ್ನು ಪಡೆಯಲು ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆದಿದ್ದಾರೆ.
ಪ್ರಾಥಮಿಕ ತನಿಖೆ ವೇಳೆ ಮುಂಬೈ ಮೂಲದ ಮಹೇಂದ್ರ ಸಿಂಗ್ ಎಂಬುವವರಿಗೆ ಸೇರಿದ್ದು, ನಗರದ ಎಸ್?ಎಸ್ ಜ್ಯುವೆಲರ್ಸ್‌ಗೆ ಮುಂಬೈನಿಂದ ಹಾಗೂ ಗುಜರಾತ್‌ಗೆ ಸಗಟು ರೂಪದಲ್ಲಿ ತರಿಸುತ್ತಿರುವ ಮಾಹಿತಿ ತಿಳಿದು ಬಂದಿದೆ. ಆದರೆ ಆರೋಪಿಗಳು ನಕಲಿ ಚಿನ್ನವೆಂದು ವಾದ ಮಾಡ್ತಿದ್ದಾರೆ.
ಇದು ಅಸಲಿ ಚಿನ್ನಾಭರಣವೆಂದು ಪೊಲೀಸರಿಗೆ ಮಾಹಿತಿ ಲಭ್ಯವಾದ ಕಾರಣ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.