೩ ಕೊರೊನಾ ಕ್ಲಸ್ಟರ್ ಘೋಷಣೆ ನಗರದಲ್ಲಿ ಸೋಂಕಿನ ಆತಂಕ


ಬೆಂಗಳೂರು, ಮಾ.೧೯- ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸ್ಫೋಟಗೊಂಡಿರುವ ಬೆನ್ನಲ್ಲೇ ಬಿಬಿಎಂಪಿ ಮೂರು ಕೋವಿಡ್ ಕ್ಲಸ್ಟರ್‌ಗಳನ್ನು ಹೊಸದಾಗಿ ಘೋಷಿಸಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದ್ದರೆ, ರಾಜ್ಯದ ಗಡಿ ಭಾಗದಲ್ಲೂ ಕೊರೊನಾ ಆರ್ಭಟ ಹೆಚ್ಚಾಗುವ ಲಕ್ಷಣಗಳು ದಟ್ಟವಾಗಿವೆ.
ದೇಶದಲ್ಲಿ ಕೋವಿಡ್ ಎರಡನೇ ಅಲೆ ಅಪ್ಪಳಿಸುತ್ತಿದೆ ಎನ್ನುವ ಮಾತುಗಳ ನಡುವೆ ಪಾಲಿಕೆಯ ಕೋವಿಡ್ ಸಂಬಂಧಿ ವರದಿ ಹೊರಬಿದಿದ್ದು, ಒಂದು ಅಪಾರ್ಟ್ಮೆಂಟ್ ಹಾಗೂ ಎರಡು ಡ್ಯುಪ್ಲೆಕ್ಸ್ ಮನೆ ಸೇರಿ ಸುತ್ತಾಮುತ್ತಾ ಕೋವಿಡ್ ಕಂಟೇನ್ಮೆಂಟ್ ಕ್ಲಸ್ಟರ್ ಎಂದು ಘೋಷಿಸಲಾಗಿದೆ.
ಯಲಹಂಕ ವಲಯದ ಗೋವರ್ಧನ್ ಅಪಾರ್ಟ್ಮೆಂರ್ಟ್ ನಲ್ಲಿ ಕೇರಳದಿಂದ ಬಂದಿರುವ ಒಬ್ಬರಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ ಕೋವಿಡ್ ಪರೀಕ್ಷೆ ನಡೆಸಿದಾಗ ಇನ್ನೂ ನಾಲ್ವರಿಗೆ ಕೊರೊನಾ ಹರಡಿರುವುದು ದೃಢಪಟ್ಟಿದೆ. ಈ ನಾಲ್ವರು ಇಸ್ಕಾನ್ ದೇವಾಲಯಕ್ಕೆ ಕೂಡ ಭೇಟಿ ನೀಡಿರುವುದು ಬೆಳಕಿಗೆ ಬಂದಿದೆ.
ಇತ್ತೀಚಿನ ಮಾಹಿತಿ ಪ್ರಕಾರ ಇನ್ನಿಬ್ಬರು ಅಪಾರ್ಟ್ಮೆಂಟ್ ವಾಸಿಗಳಿಗೆ ಕೋವಿಡ್ ದೃಢಪಟ್ಟಿದೆ. ಪ್ರತಿಯೊಂದು ಫ್ಲ್ಯಾಟ್‌ನ ನಿವಾಸಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಅವರ ವರದಿಯೂ ಇಂದು ಹೊರಬೀಳಲಿದೆ.
ಅದೇ ರೀತಿ, ಬಿ. ಇ. ಎಲ್‌ನ ತಿಂಡ್ಲು ಬಳಿಯ ಮನೆಯೊಂದರ ಸದಸ್ಯರು ಮದುವೆ ಸಮಾರಂಭಕ್ಕೆ ಹೋಗಿ ಬಂದಿದ್ದು ಇಡೀ ಕುಟುಂಬದ ಸದಸ್ಯರಿಗೆ ಕೋವಿಡ್ ದೃಢಪಟ್ಟಿದೆ. ವಯಸ್ಸಾದವರೂ ಕುಟುಂಬದಲ್ಲಿದ್ದು, ಮದುವೆ ಸಮಾರಂಭಕ್ಕೆ ಹೋಗಿ ಬಂದಿರುವುದು ಆತಂಕಕ್ಕೆ ಎಡೆ ಮಾಡಿ ಕೊಟ್ಟಿದೆ. ಹಾಗಾಗಿ, ಕೋವಿಡ್ ಕಂಟೇನ್ಮೆಂಟ್ ಝೋನ್ ಎಂದು ಮನೆಯ ಸುತ್ತ ಮುತ್ತಲಿನ ಪ್ರದೇಶವನ್ನು ಘೋಷಿಸಿದ್ದಾರೆ.
ಪ್ರಮುಖವಾಗಿ ನಗರದ ಎಂ ಎಸ್ ಪಾಳ್ಯದ ಮನೆಯ ಸುತ್ತ ಮುತ್ತ ಕೂಡ ಕಂಟೇನ್ಮೆಂಟ್ ಝೋನ್ ಎಂದು ಘೋಷಿಸಲಾಗಿದ್ದು, ೯ ಜನರಿರುವ ಕುಟುಂಬದದಲ್ಲಿನ ೭ ಸದಸ್ಯರಿಗೆ ಕೋವಿಡ್ ದೃಢಪಟ್ಟಿದೆ. ಇನ್ನುಳಿದ ಇಬ್ಬರ ಕೋವಿಡ್ ರಿಪೋರ್ಟ್ ಬರಬೇಕಿದ್ದು, ಇವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವವರ ಪತ್ತೆ ಕಾರ್ಯ ಮುಂದುವರೆದಿದೆ.
ಗಡಿಭಾಗ: ಮಹಾರಾಷ್ಟ್ರದಿಂದ ಕೊರೋನಾ ಕಂಟಕವಾಗುತ್ತಿದ್ದರೂ, ಗಡಿಭಾಗದ ಯಾದಗಿರಿ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಜನರು ಎಚ್ಚೆತ್ತಿಕೊಂಡಿಲ್ಲ. ಯಾದಗಿರಿ ವ್ಯಾಪ್ತಿಯಲ್ಲಿ ಈಗಾಗಲೇ ಇಲ್ಲಿವರಗೆ ೨೬೧೮೭೭ ಜನರಿಗೆ ಕೋವಿಡ್ ಪರೀಕ್ಷೆ ಮಾಡಿಸಿದ್ದು, ಅದರಲ್ಲಿ ಇಲ್ಲಿವರಗೆ ೧೦೭೨೮ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಇನ್ನು, ಕಳೆದ ಫೆಬ್ರವರಿ ತಿಂಗಳಲ್ಲಿ ೨೭ ಪ್ರಕರಣಗಳು ಪತ್ತೆಯಾಗಿದ್ದವು. ಮಾ.೧ ರಿಂದ ೧೫ ರವರೆಗೆ ೨೦ ಕೋವಿಡ್ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಆದರೆ,
೧೬ ಮತ್ತು ೧೭ ಎರಡು ದಿನಗಳಲ್ಲಿ ೧೦ ಪ್ರಕರಣಗಳು ಪತ್ತೆ
ಯಾದರೆ ಮತ್ತೆ ಇಂದು ೫ ಪ್ರಕರಣಗಳು ಪತ್ತೆಯಾಗಿವೆ.
ಮಾರ್ಚ್ ತಿಂಗಳಲ್ಲಿ ಇಲ್ಲಿಯವರೆಗೆ ೩೫ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ೧೫ ಪ್ರಕರಣಗಳು ಮಹಾರಾಷ್ಟ್ರದಿಂದ ವಲಸೆ ಬಂದವರಲ್ಲಿ ಪಾಸಿಟಿವ್ ಪತ್ತೆಯಾಗಿದೆ. ಈಗಾಗಲೇ ಮಹಾರಾಷ್ಟ್ರದಿಂದ ವಲಸೆ ಬರುವರ ಮೇಲೆ ಹದ್ದಿನ ಕಣ್ಣಿಡಲು ಚೆಕ್ ಪೊಸ್ಟ್ ಹಾಕಿ ಟೆಸ್ಟ್ ಮಾಡಲಾಗುತ್ತಿದೆ ಎನ್ನುತ್ತಾರೆ ಸ್ಥಳೀಯ ಅಧಿಕಾರಿಗಳು.