೩೭೧(ಜೆ) ಮೀಸಲಾತಿ ಪರಿಣಾಮಕಾರಿ ಅನುಷ್ಠಾನವಾಗಲಿ- ಅಮರೇಶ ನುಗಡೋಣಿ

ಮಾನ್ವಿ.ಸೆ.೧೮ ಕಲ್ಯಾಣ ಕರ್ನಾಟಕ ಎಂದು ಕೇವಲ ಹೆಸರು ಬದಲಾವಣೆ ಮಾಡಿದರೆ ಸಾಲದು, ಈ ಭಾಗದ ಜನರ ದುಖ್ಖ-ದುಮ್ಮಾನ ಮತ್ತು ದೈನಂದಿನ ಭವಣೆಗಳನ್ನು ನೀಗಿಸಿದಾಗ ಮಾತ್ರ ನಿಜವಾದ ಕಲ್ಯಾಣವಾಗುತ್ತದೆ ಎಂದು ಹಿರಿಯ ಸಾಹಿತಿ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಅಮರೇಶ ನುಗಡೋಣಿ ಅಭಿಪ್ರಾಯಪಟ್ಟರು.
ಪಟ್ಟಣದ ನೇತಾಜಿ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಬಹುಜನ ಸಂಘರ್ಷ ಸಮಿತಿ ವತಿಯಿಂದ ಆಯೋಜಿಸಿದ್ದ ನಿಜವಾದ ಕಲ್ಯಾಣ ಕರ್ನಾಟಕಕ್ಕಾಗಿ ೩೭೧(ಜೆ) ಮೀಸಲಾತಿ ತಿಳಿಯೋಣ ಬನ್ನಿ, ಪಡೆಯೋಣ ಬನ್ನಿ ಎಂಬ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ನಿಜಾಮರ ಆಳ್ವಿಕೆಯಿಂದ ವಿಮುಕ್ತಿ ಪಡೆದ ನಂತರ ಈ ಭಾಗದಲ್ಲಿ ಇಂದಿಗೂ ಅನಕ್ಷರತೆ, ಬಡತನ, ನಿರುದ್ಯೋಗ, ವಲಸೆ ಸೇರಿದಂತೆ ಜನರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳೂ ಕೂಡ ಸಿಗದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದರು.
ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಕಲ್ಯಾಣ ಕರ್ನಾಟಕ ಭಾಗದ ೦೭ ಜಿಲ್ಲೆಗಳಲ್ಲಿ ಇಂದಿಗೂ ಸುಸಜ್ಜಿತ ರಸ್ತೆಗಳಿಲ್ಲ, ಉತ್ತಮ ಆಸ್ಪತ್ರೆಗಳಿಲ್ಲ, ಉನ್ನತ ಶಿಕ್ಷಣ ಮತ್ತು ಶುದ್ಧ ಕುಡಿಯುವ ನೀರಿಗೂ ಜನ ಪರದಾಡಬೇಕಾದಂತಹ ಶೋಚನೀಯ ಪರಿಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಾದೇಶಿಕ ಅಸಮತೋಲನೆ ನಿರ್ಮೂಲನೆಗಾಗಿ ಜಾರಿಗೆ ತಂದ ೩೭೧(ಜೆ) ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಮೂಲಕ ಖಾಲಿ ಹುದ್ದೆಗಳ ಭರ್ತಿ, ಉದ್ಯೋಗ ಸೃಷ್ಟಿ, ವಲಸೆ ತಡೆ, ಬಾಲ್ಯ ವಿವಾಹ ತಡೆಯುವಂತಹ ಕಾಯ್ದೆ ಮತ್ತು ಯೋಜನೆಗಳಿಗೆ ಸರಕಾರ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಬಹುಜನ ಸಂಘರ್ಷ ಸಮಿತಿ ಅಧ್ಯಕ್ಷ ಜೆ.ಶರಣಪ್ಪ ಬಲ್ಲಟಗಿ, ನೇತಾಜಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ಈ.ನರಸಿಂಹ, ಕಾರ್ಯದರ್ಶಿ ಕೆ. ವಿಜಯಲಕ್ಷ್ಮೀ, ಜನಶಕ್ತಿ ಮಾರೆಪ್ಪ ಹರವಿ, ಡಿಪಿಐ ಜಿಲ್ಲಾಧ್ಯಕ್ಷ ಲಕ್ಷ್ಮಣ ಜಾನೇಕಲ್, ಪತ್ರಕರ್ತರಾದ ಹೊನ್ನಪ್ಪ ಶಾಖಾಪೂರು, ಶಾಲಾ-ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.