೩೭ನೇ ಉಚಿತ ಬೇಸಿಗೆ ಶಿಬಿರಕ್ಕೆ ಚಾಲನೆ

ಕೋಲಾರ,ಏ,೧೧- ಕೋಲಾರ ಕ್ರೀಡಾ ಸಂಘವು ಕೋಲಾರ ನಗರದ ಟೇಕಲ್ ರಸ್ತೆಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಮಕ್ಕಳ ಉದ್ಯಾವನದಲ್ಲಿ ದಿವಂಗತ ಡಿ. ಸುಧಾಕರ್ ಸ್ಮರಣಾರ್ಥ ಹಮ್ಮಿಕೊಂಡಿರುವ ೩೭ನೇ ವರ್ಷದ ಬೇಸಿಗೆ ತರಬೇತಿ ಶಿಬಿರವನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಉದ್ಘಾಟಿಸಿದರು.
ಶಿಬಿರಾರ್ಥಿಗಳ ಕುರಿತು ಮಾತನಾಡಿದ ಅವರು, ಕೀಳಿರಿಮೆಯಿಂದ ಮನುಷ್ಯ ಹಿಂದುಳಿಯುತ್ತಾನೆ. ಸಿಕ್ಕ ಅವಕಾಶವನ್ನು ಯಾರು ಸಮರ್ಥವಾಗಿ ಬಳಸಿಕೊಳ್ಳುತ್ತಾರೋ ಅವರು ಮಾತ್ರವೇ ಸಾಧನೆಯ ಶಿಖರವನ್ನೇರುತ್ತಾರೆ ಎಂದುಅಭಿಪ್ರಾಯ ಪಟ್ಟರು.
ಆರಂಭ ಶೂರತ್ವವನ್ನು ತೋರದೇ ೩೭ ವರ್ಷಗಳಿಂದ ಸತತವಾಗಿ ಉಚಿತ ಬೇಸಿಗೆ ಶಿಬಿರವನ್ನು ನಡೆಸಿಕೊಂಡು ಬರುತ್ತಿರುವ ಸಂಘದ ಬಗ್ಗೆ ಮತ್ತು ಸಂಘದ ಹೊಸ ಪ್ರಯತ್ನ ಮಕ್ಕಳ ಬಯಲುಗ್ರಂಥಾಲಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ದಿವಂಗತ ಸುಧಾಕರ್‌ರವರ ಬಗ್ಗೆ ಮಾತನಾಡಿ ಅತ್ಯಂತ ಶಿಸ್ತುಬಧ್ಧ ದೈಹಿಕ ಶಿಕ್ಷಕರಾಗಿ ಅವರು ಗಳಿಸಿದ ಪ್ರೀತಿ, ಕ್ರೀಡಾಕ್ಷೇತ್ರದಲ್ಲಿಅವರ ಸಾಧನೆಯನ್ನುಇದೇ ಸಂದರ್ಭದಲ್ಲಿ ಸ್ಮರಿಸಿದರು.
ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಕೋಲಾರದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಕೋಲಾರ ಕ್ರೀಡಾ ಸಂಘವು ಎಲ್ಲಾ ಸಂಘಗಳಿಗಿಂತಲೂ ಮುಂಚೂಣಿಯಲ್ಲಿದೆ. ಈ ಸಂಘವು ಪ್ರತಿವರ್ಷಉಚಿತ ಬೇಸಿಗೆ ಶಿಬಿರ ನಡೆಸುತ್ತಿರುವ ಕಾರಣ ಇತ್ತೀಚೆಗೆ ನಾಯಿಕೊಡೆಗಳಂತೆ ಏಳುತ್ತಿರುವ ಕಮರ್ಶಿಯಲ್ ಶಿಬಿರಗಳಿಗೆ ಕೋಲಾರದಲ್ಲಿ ಅವಕಾಶವಾಗುತ್ತಿಲ್ಲ.
ಈ ಸಂಘವನ್ನು ದಿವಂಗತ ದೈಹಿಕ ಶಿಕ್ಷಕರಾದ ಸುಧಾಕರ್ ಮತ್ತು ಹಿರಿಯ ಕ್ರೀಡಾಪಟು ಪುರುಷೋತ್ತಮ್‌ರವರು ಉತ್ತಮವಾಗಿ ಸಂಘಟಿಸಿದ್ದಾರೆ. ಇದೇ ರೀತಿ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಸಂಘದ ಸದಸ್ಯರ ನಿಸ್ವಾರ್ಥ ಸೇವೆಯೇ ಸಂಘವನ್ನು ಈ ಎತ್ತರಕ್ಕೆ ಬೆಳೆಸಿದೆ ಎಂದು ಅಭಿಪ್ರಾಯ ಪಟ್ಟರು.
ಕೋಲಾರ ಕ್ರೀಡಾ ಸಂಘದ ತರಬೇತಿಯಿಂದಲೇ ಜಿಲ್ಲೆಯ ೨೫ ಕ್ಕೂ ಹೆಚ್ಚು ಮಂದಿ ಯುವಕರು ಅಗ್ನಿಪಥ್ ಯೋಜನೆಯಡಿ ಭಾರತೀಯ ಸೇನೆಗೆ ಆಯ್ಕೆಯಾಗುವಂತಾಯಿತು ಎಂದು ಶ್ಲಾಘಿಸಿದರು.
ಯುವ ಮುಖಂಡ ಓಂಶಕ್ತಿ ಚಲಪತಿ, ವಾಸವಿ ಸಂಘದ ಅಧ್ಯಕ್ಷ ಗೋವಿಂದರಾಜು ಮಕ್ಕಳಿಗೆ ಹಿತವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಲಾರಕ್ರೀಡಾ ಸಂಘದಅಧ್ಯಕ್ಷ ಸಾಮಾ ಅನಿಲ್ ಕುಮಾರ್ ವಹಿಸಿದ್ದರು. ಕಾರ್ಯಕ್ರಮದಲ್ಲಿಸತ್ಯನಾರಾಯಣ ಜ್ಯುವೆಲ್ಲರ್‍ಸ್ನ ಮಾಲೀಕರಾದ ವೆಂಕಟೇಶ್, ರಾಜಶ್ರೀ ಹಾರ್ಡ್‌ವೇರಿನ ಮಂಜುನಾಥ್, ಸಾಮಾಜಿಕ ಕಾರ್ಯಕರ್ತ ಮಂಜುನಾಥ್, ಪೊಲೀಸ್ ಇಲಾಖೆಯ ಸುರೇಶ್ ಕುಮಾರ್ , ಪತ್ರಕರ್ತ ಚಂದ್ರು, ಜಿಲ್ಲಾ ಖೋ-ಖೋ- ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಮನ್ನಾನ್, ರವಿ, ಸಂಘದ ತರಬೇತುದಾರ ರಾದಕೃಷ್ಣಮೂರ್ತಿ, ಸುರೇಶ್ ಬಾಬು, ರಾಧೇಯ, ಅನಿಲ್ ಕುಮಾರ್, ಸಂಘದ ಹಿರಿಯ ಸದಸ್ಯರಾದ ಪುರುಷೋತ್ತಮ, ನಾರಾಯಣ ಸ್ವಾಮಿ, ನಾಗೇಂದ್ರ, ಮಲ್ಲಿಕಾರ್ಜುನ್, ಸಾಮಾ ಸುನಿಲ್‌ಕುಮಾರ್, ವಿಜಯ್ ಎಂ ವರ್ಣೇಕರ್, ಲೋಕೇಶ್, ಸಹ ಸದಸ್ಯರಾದ ಪವಿತ್ರಾ, ಪಾವನಿ, ಭವ್ಯ, ಅಭಿರಾಮ್, ಜಾನ್ ದಿಲೀಪ್, ಬಾಲಾಜಿ, ರಂಜಿತ್, ನಂದೀಶ್, ಪ್ರಜ್ಞಾ ಮುಂತಾದವರು ಭಾಗವಹಿಸಿದ್ದರು.
ಕುಮಾರಿ ಶ್ರುತಿ ಮತ್ತು ಮಾಸ್ಟರ್ ಮನು ಪ್ರಾರ್ಥಿಸಿ, ಸಂಘದ ಕಾರ್ಯದರ್ಶಿ ಹರೀಶ್ ಬಾಬು ನಿರೂಪಿಸಿದರು.