೩೬ ಆಸ್ತಿಗಳಿಗೆ ಪರಿಹಾರ – ಸಾಮಾನ್ಯ ಸಭೆಯಲ್ಲಿ ನಿರ್ಧಾರ

ಮಚ್ಚಿ ಬಜಾರ್ ಅಗಲೀಕರಣ : ನಿನ್ನೆ ಆರಂಭ ಇಂದು ಸ್ಥಗಿತ
ರಾಯಚೂರು.ಜೂ.೦೭- ಮಚ್ಚಿ ಬಜಾರ್ ಅಗಲೀಕರಣ ಕಾರ್ಯಾಚರಣೆ ನಿನ್ನೆ ಆರಂಭಗೊಳ್ಳುತ್ತಿದ್ದಂತೆ ಇಂದು ವಿವಾದಕ್ಕೆಡೆಯಾಗಿ ಕಾರ್ಯಾಚರಣೆ ಸ್ಥಗಿತಗೊಂಡು ೧೦ ಅಡಿಗಳ ಮೇಲೆ ಕಟ್ಟಡಗಳನ್ನು ಕಳೆದುಕೊಳ್ಳುವ ಜನರಿಗೆ ಪರಿಹಾರ ನೀಡುವ ಭರವಸೆ ನಂತರ ಮತ್ತೇ ನಾಳೆಯಿಂದ ಕಾರ್ಯಾಚರಣೆ ಆರಂಭಕ್ಕೆ ಸ್ಥಳೀಯರು ಸಹಕರಿಸಿರುವ ಸಂಗತಿ ತಿಳಿದು ಬಂದಿದೆ.
ತೀನ್ ಖಂದೀಲ್‌ನಿಂದ ಫಾರ್ಚೂನ್ ಆಸ್ಪತ್ರೆವರೆಗೂ ಸುಮಾರು ೩೬ ಆಸ್ತಿಗಳು ೧೦ ಅಡಿಗಳಿಗಿಂತ ಅಧಿಕ ಪ್ರಮಾಣದಲ್ಲಿ ತೆರವುಗೊಳ್ಳುವ ಹಿನ್ನೆಲೆಯಲ್ಲಿ ಪರಿಹಾರ ಬೇಕು ಎನ್ನುವ ಬೇಡಿಕೆ ಕಾಮಗಾರಿಗೆ ಅಡ್ಡಿಯಾಗಿತ್ತು. ಅಲ್ಲದೇ, ಕಟ್ಟಡ ತೆರವು ಕಾರ್ಯಾಚರಣೆ ನ್ಯಾಯ ಸಮ್ಮತ ಮತ್ತು ಎರಡು ಬದಿಗಳಲ್ಲಿ ಸಮಾನವಾಗಿ ನಡೆಯಬೇಕು ಎನ್ನುವ ವಾದ ಸ್ಥಳೀಯರದ್ದಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ನಗರಸಭೆ ಅಧಿಕಾರಿಯೂ ಪುನಃ ಅಳತೆ ಮಾಡುವ ಮೂಲಕ ಯಾವ ಕಟ್ಟಡ ಎಷ್ಟು ಪ್ರಮಾಣದಲ್ಲಿ ತೆರವುಗೊಳ್ಳುವುದು ಎನ್ನುವುದನ್ನು ಪರಿಶೀಲಿಸಲಾಯಿತು.
ತೀನ್ ಖಂದೀಲ್‌ನಿಂದ ಅಶೋಕ ಡಿಪೋಕ್ಕೆ ಹೋಗುವ ಮಾರ್ಗದಲ್ಲಿ ರಸ್ತೆಯ ಬಲಬದಿಯಲ್ಲಿ ೧೬ ಕಟ್ಟಡಗಳು ಮತ್ತು ಎಡಬದಿಯಲ್ಲಿ ೨೦ ಕಟ್ಟಡಗಳು ೧೦ ಅಡಿಗಳಿಗಿಂತ ಅಧಿಕ ಪ್ರಮಾಣದ ಸ್ಥಳ ರಸ್ತೆಗಾಗಿ ಕಳೆದುಕೊಳ್ಳಲಿವೆ. ಈ ಆಸ್ತಿ ಮಾಲೀಕರಿಗೆ ತೀವ್ರ ನಷ್ಟವಾಗುತ್ತಿದ್ದರಿಂದ ಪರಿಹಾರವನ್ನು ನೀಡುವಂತೆ ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಗರಸಭೆ ಅಧ್ಯಕ್ಷರು, ಪೌರಾಯುಕ್ತರು ಯಾವ ಆಸ್ತಿ ಎಷ್ಟು ಪ್ರಮಾಣದಲ್ಲಿ ತೆರವುಗೊಳ್ಳಲಿದೆ ಎನ್ನುವ ವಿಷಯವನ್ನು ಪರಿಶೀಲಿಸಲು ಇಂದು ಸಮೀಕ್ಷೆ ನಡೆಸಲಾಯಿತು.
ನಗರಸಭೆ ಅಧಿಕಾರಿಗಳು ಟೇಪ್ ಹಿಡಿದು ಅಳತೆ ಮಾಡುವ ಮೂಲಕ ಅಲ್ಲಿಯ ಆಸ್ತಿಯ ವಿವರವನ್ನು ದಾಖಲಿಸಿಕೊಂಡಿದ್ದಾರೆ. ಜೂ.೧೧ ರಂದು ನಗರಸಭೆ ಸಾಮಾನ್ಯ ಸಭೆಯಲ್ಲಿ ಈ ವಿಷಯವನ್ನು ಮಂಡಿಸಿ, ಪರಿಹಾರಕ್ಕೆ ತೀರ್ಮಾನ ಕೈಗೊಳ್ಳುವ ಭರವಸೆ ನೀಡಲಾಗಿದೆ. ಎಲ್ಲವೂ ಸುಗಮವಾಗಿ ನಡೆದರೇ, ನಾಳೆಯಿಂದ ರಸ್ತೆ ಅಗಲೀಕರಣ ಕಾರ್ಯಾಚರಣೆ ಮತ್ತೇ ಮುಂದುವರೆಯುವ ಸಾದ್ಯತೆಗಳಿವೆ. ನಿನ್ನೆ ತೀನ್ ಖಂದೀಲ್‌ನಿಂದ ೧೦೦ ಮೀಟರ್ ಅಂತರವರೆಗೂ ಎರಡು ಬದಿಯಲ್ಲಿ ೫೦ ಅಡಿ ರಸ್ತೆ ಅಗಲೀಕರಣ ಕಾರ್ಯ ಪೂರ್ಣಗೊಂಡಿದೆ. ಇಂದು ಚರಂಡಿ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗಿತ್ತು.
ಆದರೆ, ಕೆಲ ಕಟ್ಟಡ ಮಾಲೀಕರು ಕಟ್ಟಡ ತೆರವಿನ ಹಿನ್ನೆಲೆಯಲ್ಲಿ ಪರಿಹಾರ ನೀಡಿದರೇ ಮಾತ್ರ ಕಟ್ಟಡ ತೆರವಿಗೆ ಅವಕಾಶ ನೀಡುವುದಾಗಿ ಪಟ್ಟು ಹಿಡಿದಿದ್ದರಿಂದ ಪರಿಹಾರಕ್ಕೂ ಈಗ ಪರಿಶೀಲನೆ ನಡೆದಿದೆ. ಒಟ್ಟಾರೆಯಾಗಿ ಮಚ್ಚಿ ಬಜಾರ್ ಅಗಲೀಕರಣ ಅನೇಕ ವಿವಾದ ಮತ್ತು ಅಡ್ಡಿ ಆತಂಕಗಳ ಮಧ್ಯೆ ಮುಂದುವರೆದಿದ್ದು, ನಾಳೆ ಉದ್ದೇಶಿತ ಕಾರ್ಯಾಚರಣೆ ಯಾವುದೇ ಆತಂಕವಿಲ್ಲದೇ ಮುಂದುವರೆಯುವುದೇ? ಕಾದು ನೋಡಬೇಕಾಗಿದೆ.