೩,೬೦೦ ಪ್ಯಾಲೇಸ್ತೀನ್ ಮಕ್ಕಳ ಸಾವು: ಯುನಿಸೆಫ್

ನ್ಯೂಯಾರ್ಕ್, ನ.೩- ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ಆರಂಭದ ೨೫ ದಿನಗಳಲ್ಲಿ ೩,೬೦೦ಕ್ಕೂ ಅಧಿಕ ಫೆಲೆಸ್ತೀನಿಯನ್ ಮಕ್ಕಳು ಸಾವನ್ನಪ್ಪಿದ್ದಾರೆ. ಗಾಜಾ ಈಗ ಸಾವಿರಾರು ಮಕ್ಕಳ ಸ್ಮಶಾನಭೂಮಿಯಾಗಿ ಮಾರ್ಪಟ್ಟಿದೆ ಎಂದು ಯುನಿಸೆಫ್ ವಕ್ತಾರ ಜೇಮ್ಸ್ ಎಲ್ಡರ್ ಕಳವಳ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಪ್ರಪಂಚದಲ್ಲಿ ನಡೆದ ಎಲ್ಲಾ ಸಂಘರ್ಷಗಳಲ್ಲಿ ಮಡಿದ ಮಕ್ಕಳ ಪ್ರಮಾಣಕ್ಕಿಂತ ಗಾಜಾದಲ್ಲಿ ಕೇವಲ ೩ ವಾರದ ಸಂಘರ್ಷದಲ್ಲಿ ಸಾವನ್ನಪ್ಪಿದ ಮಕ್ಕಳ ಸಂಖ್ಯೆ ಹೆಚ್ಚು. ಉದಾಹರಣೆಗೆ ಕಳೆದ ವರ್ಷ ಜಾಗತಿಕವಾಗಿ ಸುಮಾರು ೨೪ ಯುದ್ಧಕ್ಷೇತ್ರಗಳಲ್ಲಿ ೨,೯೮೫ ಮಕ್ಕಳು ಹತರಾಗಿದ್ದಾರೆ ಎಂದು ‘ಸೇವ್ ದಿ ಚಿಲ್ಡ್ರನ್ಸ್’ ಸಂಸ್ಥೆಯ ಅಂಕಿ-ಅಂಶವನ್ನು ಉಲ್ಲೇಖಿಸಿ ಅವರು ಮಾಹಿತಿ ನೀಡಿದ್ದಾರೆ. ಗಾಜಾ ಪಟ್ಟಿಯ ೨.೩ ದಶಲಕ್ಷ ನಿವಾಸಿಗಳಲ್ಲಿ ಸುಮಾರು ೫೦ರಷ್ಟು% ೧೮ ವರ್ಷದೊಳಗಿನವರು ಮತ್ತು ಗಾಜಾದಲ್ಲಿ ಇದುವರೆಗಿನ ಯುದ್ಧದಲ್ಲಿ ಮೃತಪಟ್ಟವರಲ್ಲಿ ೪೦%ದಷ್ಟು ಮಕ್ಕಳು ಎಂದು ಗಾಝಾದ ಆರೋಗ್ಯ ಇಲಾಖೆ ಹೇಳಿದೆ. ಅಕ್ಟೋಬರ್ ೨೬ರವರೆಗಿನ ಅಂಕಿಅಂಶದ ಪ್ರಕಾರ, ೧೨ ವರ್ಷಕ್ಕಿಂತ ಕೆಳಹರೆಯದ ೨೦೦೧ ಮಕ್ಕಳು, ೩ ವರ್ಷಕ್ಕೂ ಕೆಳಗಿನ ೬೧೫ ಮಕ್ಕಳು ಗಾಜಾದಲ್ಲಿ ಹತರಾಗಿದ್ದಾರೆ. ವೈಮಾನಿಕ ದಾಳಿ, ತಪ್ಪು ಗುರಿಗೆ ಅಪ್ಪಳಿಸಿದ ರಾಕೆಟ್‌ಗಳ ಹೊಡೆತಕ್ಕೆ ಸಿಲುಕಿ, ಸ್ಫೋಟದಿಂದ ಸುಟ್ಟುಹೋಗಿ ಅಥವಾ ಬಾಂಬ್‌ದಾಳಿಯಲ್ಲಿ ನೆಲಸಮಗೊಂಡ ಕಟ್ಟಡಗಳ ಅವಶೇಷಗಳಡಿ ಸಿಲುಕಿ ಮಕ್ಕಳು, ನವಜಾತ ಶಿಶುಗಳು ಪ್ರಾಣ ಕಳೆದುಕೊಂಡಿವೆ ಎಂದು ಇಲಾಖೆ ಹೇಳಿದೆ. ಗಾಜಾದಲ್ಲಿ ಪೋಷಕರಾಗಿರುವುದು ಶಾಪವಾಗಿದೆ. ಕ್ಷಿಪಣಿಗಳು ಮನೆಗಳಿಗೆ ಅಪ್ಪಳಿಸಿದಾಗ ಮನೆಗಳು ಮಕ್ಕಳ ತಲೆಮೇಲೆ ಉರುಳಿಬೀಳುತ್ತವೆ. ಕುಸಿದು ಬಿದ್ದ ಅವಶೇಷಗಳಡಿಯಿಂದ ರಕ್ಷಿಸಲ್ಪಟ್ಟ ಮಕ್ಕಳು ಕೈ, ಕಾಲು, ತಲೆಗಳಿಗೆ ಬ್ಯಾಂಡೇಜ್ ಸುತ್ತಿಕೊಂಡು ಆಸ್ಪತ್ರೆಯಲ್ಲಿ ಅಳುತ್ತಾ ಮಲಗಿರುವುದನ್ನು ನೋಡಿದಾಗ ಸಂಕಟವಾಗುತ್ತದೆ ಎಂದು ಹಲವು ಪೋಷಕರು ಅಳಲು ತೋಡಿಕೊಂಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಗಾಜಾ ಯುದ್ದಕ್ಕೆ ಇಸ್ರೇಲ್ ಕಾರಣ: ಆಂಜೆಲಿನಾ ಜೋಲಿ
ಗಾಜಾ ನಿವಾಸಿಗಳ ಮೇಲೆ ಇಸ್ರೇಲ್ ಉದ್ದೇಶಪೂರ್ವಕ ಬಾಂಬ್ ದಾಳಿ ನಡೆಸುತ್ತಿದೆ. ಗಾಜಾ ಯುದ್ಧಕ್ಕೆ ಇಸ್ರೇಲ್ ಕಾರಣ ಎಂದು ಖ್ಯಾತ ಹಾಲಿವುಡ್ ನಟಿ, ಸಾಮಾಜಿಕ ಕಾರ್ಯಕರ್ತೆ ಆಂಜೆಲಿನಾ ಜೊಲಿ ಹೇಳಿದ್ದಾರೆ. ಈ ಕುರಿತು ಪೋಸ್ಟ್ ಮಾಡಿರುವ ಅವರು, ಅದರೊಂದಿಗೆ ಜಬಾಲಿಯ ನಿರಾಶ್ರಿತರ ಶಿಬಿರದ ಮೇಲೆ ನಡೆದಿರುವ ಬಾಂಬ್ ದಾಳಿಯ ಚಿತ್ರವನ್ನೂ ಅವರು ಪೋಸ್ಟ್ ಮಾಡಿದ್ದಾರೆ. ಗಾಝಾದಲ್ಲಿ ಸಿಲುಕಿಕೊಂಡಿರುವ ದೊಡ್ಡ ಜನಸಂಖ್ಯೆಯ ಮೇಲೆ ನಡೆಯುತ್ತಿರುವ ಉದ್ದೇಶಪೂರ್ವಕ ಬಾಂಬ್ ದಾಳಿಯಾಗಿದೆ. ಗಾಜಾದಲ್ಲಿ ಸಿಲುಕಿಕೊಂಡು ಎಲ್ಲಿಯೂ ಹೋಗಲಾಗದ ಜನರ ಮೇಲೆ ನಡೆಯುತ್ತಿರುವ ಉದ್ದೇಶಪೂರ್ವಕ ಬಾಂಬ್ ದಾಳಿ ಇದು. ಕಳೆದ ಎರಡು ದಶಕಗಳಿಂದ ಗಾಜಾ ಬಯಲು ಬಂದೀಖಾನೆಯಾಗಿದ್ದು, ಅದು ತುಂಬಾ ವೇಗವಾಗಿ ದೊಡ್ದ ಸಮಾಧಿಯಾಗಿ ಬದಲಾಗುತ್ತಿದೆ. ಇಸ್ರೇಲ್ ನ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿರುವವರ ಪೈಕಿ ಶೇ. ೪೦ರಷ್ಟು ಮಂದಿ ಮಕ್ಕಳಾಗಿದ್ದಾರೆ. ಇಡೀ ಕುಟುಂಬಗಳನ್ನು ಹತ್ಯೆಗೈಯ್ಯಲಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.