೩೩ ಪಿಡಿಒ ರಕ್ಷಣೆ ಆರೋಪಕ್ರಿಮಿನಲ್ ಪ್ರಕರಣ ದಾಖಲಿಸಲು ಕಾನೂನು ಹೋರಾಟಕ್ಕೆ ಹೂಗಾರ್ ಸಿದ್ಧತೆ

(ಸಂಜೆವಾಣಿ ಪ್ರತಿನಿಧಿಯಿಂದ)
ರಾಯಚೂರು,ಫೆ.೩:ದೇವದುರ್ಗ ವ್ಯಾಪ್ತಿಯ ೩೩ ಗ್ರಾಮಪಂಚಾಯ್ತಿ ವ್ಯಾಪ್ತಿಯಡಿ ನಡೆದಿದ್ದ ನರೇಗಾ ಅನುದಾನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ೩೩ ಪಿಡಿಓಗಳನ್ನು ಅಮಾನತು ಮಾಡಿದ್ದರು. ಇದುವರೆಗೂ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಲ್ಲ. ಈ ಹಿನ್ನೆಲೆಯಲ್ಲಿ ಕಾನೂನು ಹೋರಾಟ ನಡೆಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಶರಣುಹೂಗಾರ್ ಮಾಹಿತಿ ನೀಡಿದ್ದಾರೆ.
ಈ ಭ್ರಷ್ಟ ಪಿಡಿಓಗಳ ರಕ್ಷಣೆಗೆ ಮೇಲಧಿಕಾರಿಗಳು ಪ್ರಯತ್ನ ನಡೆಸುತ್ತಿದ್ದಾರೆಯೇ ಎನ್ನುವ ಅನುಮಾನ ವ್ಯಕ್ತಪಡಿಸಿರುವ ಹೂಗಾರ್ ೩೩ ಪಿಡಿಓಗಳನ್ನು ನರೇಗಾ ಅನುದಾನ ದುರ್ಬಳಕೆಯಡಿ ಅಮಾನತು ಮಾಡಲಾಗಿದೆ.ಆದರೆ,ಕ್ರಿಮಿನಲ್ ಪ್ರಕರಣ ದಾಖಲಿಸಲು ತಾಂತ್ರಿಕ ದೋಷದ ಕಾರಣ ನೀಡಲಾಗಿದೆ ಮತ್ತು ಈ ಸಂಬಂಧ ಕೇಂದ್ರಕ್ಕೆ ಪತ್ರ ಬರೆದಿರುವುದಾಗಿ ಜಿಪಂ ಸಿಇಓ ರಾಹುಲ್‌ಪಾಂಡೆ ತಿಳಿಸಿರುವುದು ಪಿಡಿಓಗಳು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ದೇವದುರ್ಗ ಗ್ರಾಮಪಂಚಾಯ್ತಿಗಳ ನರೇಗಾದಡಿ ನಡೆದ ೨೦೨೦-೨೧ ಹಾಗೂ ೨೦೨೨-೨೩ರ ನರೇಗಾ ಯೋಜನೆ ಅನುಷ್ಠಾನದಲ್ಲಿ ಕೋಟ್ಯಂತರ ರೂ,ಗಳನ್ನು ಗ್ರಾ.ಪಂ ಅಧಿಕಾರಿಗಳು ಲೂಟಿ ಮಾಡಿದ್ದರು. ಈ ಸಂಬಂಧ ಸಲ್ಲಿಸಿದ ದೂರನ್ನು ಪರಿಗಣಿಸಿ ದೇವದುರ್ಗ ತಾಲ್ಲೂಕಿನ ೩೩ ಪಿಡಿಓಗಳನ್ನು ಅಮಾನತು ಮಾಡಲಾಗಿತ್ತು.
ಸಾಮಾಜಿಕ ಪರಿಶೋಧನಾ ನಿರ್ದೇಶಕರು ಸಲ್ಲಿಸಿದ್ದ ವರದಿಯಾಧರಿಸಿ ೩೩ ಪಿಡಿಓಗಳನ್ನು ಜಿಲ್ಲಾ ಪಂಚಾಯ್ತಿ ಸಿಇಒ ಅಮಾನತು ಮಾಡಿದ್ದರು.
ದೇವದುರ್ಗ ವ್ಯಾಪ್ತಿಯ ಗ್ರಾ.ಪಂಗಳಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ದೇವದುರ್ಗ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಪಂಪಾಪತಿ ಹಿರೇಮಠ ಹಾಗೂ ಸಹಾಯಕ ನಿರ್ದೇಶಕ ಬಸಪ್ಪ ನಾಯಕರನ್ನು ಹೊರತುಪಡಿಸಿ ಬೇರೆ ಯಾರ ವಿರುದ್ಧವೂ ಇದುವರೆಗೂ ಎಫ್‌ಐಆರ್ ದಾಖಲಿಸದಿರುವುದು ಪಿಡಿಓಗಳ ರಕ್ಷಣೆಗೆ ಅಧಿಕಾರಿಗಳು ಮುಂದಾಗಿದ್ದಾರೆಯೇ ಎಂಬ ಅನುಮಾನಗಳು ವ್ಯಕ್ತಗೊಂಡಿವೆ.
ಈ ೩೩ ಪಿಡಿಓಗಳು ಕಾಮಗಾರಿ ಅಳತೆಗಿಂದ ಹೆಚ್ಚುವರಿ ಹಣ ಪಾವತಿ, ಕಾಮಗಾರಿ ನಿರ್ವಹಿಸದೆ ಹಣ ಪಾವತಿ, ಕ್ರಿಯಾಯೋಜನೆ ಅನುಮೋದನೆಗಿಂತ ಹೆಚ್ಚಿನ ಮೊತ್ತ ಪಾವತಿ, ಬೇರೆ ಊರಿನಲ್ಲಿ ವಾಸಿಸುತ್ತಿರುವ ಕೂಲಿಕಾರ್ಮಿಕರ ಹೆಸರಿನಲ್ಲಿ ಹಣ ಪಾವತಿ, ಲೆಕ್ಕ ಶೀರ್ಷಿಕೆಗೆ ರಾಜಧನ ಪಾವತಿ ನಿರ್ಲಕ್ಷ್ಯ ಸೇರಿದಂತೆ ಇನ್ನಿತರ ಕಾಮಗಾರಿಗೆ ಸಂಬಂಧಿಸಿದ ಸೂಕ್ತ ಹಣ ಪಾವತಿಸದೆ ಭ್ರಷ್ಟಾಚಾರವೆಸಗಿದ್ದಾರೆ. ಆದರೆ, ಈ ಪಿಡಿಓಗಳು ಅಮಾನತುಗೊಂಡು ಇಲಾಖೆಯ ತನಿಖೆ ಎದುರಿಸುವಂತೆ ಸಿಇಓ ಸೂಚಿಸಿದ್ದಾರೆ. ಇಷ್ಟೊಂದು ಮಟ್ಟದ ಭ್ರಷ್ಟಾಚಾರವೆಸಗಿರುವ ಪಿಡಿಓಗಳಿಗೆ ಮಾಸಿಕ ಜೀವನಾಧಾರ ಭತ್ಯೆ ಪಡೆಯಲು ಅರ್ಹರಾಗಿದ್ದಾರೆ ಎನ್ನುವುದನ್ನು ನಿಯಮಾವಳಿ ೧೯೫೮ರ ನಿಯಮ ೯೮ರಡಿ ಸಿಇಓ ಸೂಚಿಸಿದ್ದಾರೆ.ಆದರೆ,ಕ್ರಿಮಿನಲ್ ಪ್ರಕರಣ ದಾಖಲಿಸಲು ತಾಂತ್ರಿಕ ನೆಪ ಹೇಳಿರುವುದು ಸಾಮಾಜಿಕ ಹೋರಾಟಗಾರರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲಾ ಪಂಚಾಯ್ತಿ ಸಿಇಓ ಇದನ್ನು ಗಂಭೀರವಾಗಿ ಪರಿಗಣಿಸಬೇಕು,ದೂರು ದಾಖಲಿಸಲು ತಿಳಿಸಿರುವ ತಾಂತ್ರಿಕ ದೋಷವನ್ನು ತಕ್ಷಣ ಸರಿಪಡಿಸಬೇಕು. ಎಲ್ಲರ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ನಿರ್ಲಕ್ಷಿಸಿದರೆ ಕಾನೂನು ಹೋರಾಟ ಅನಿವಾರ್ಯ ಎಂದು ಸಾಮಾಜಿಕ ಹೋರಾಟಗಾರ ಶರಣುಹೂಗಾರ್ ಎಚ್ಚರಿಸಿದ್ದಾರೆ.