೩೨೪.೭೧ ಮೆ.ಟನ್ ಆಮ್ಲಜನಕ ನಗರಕ್ಕೆ ಪೂರೈಕೆ


ಬೆಂಗಳೂರು, ಜೂ.೧- ಆಮ್ಲಜನಕ ಕೊರತೆ ಹಿನ್ನೆಲೆಯಲ್ಲಿ ದೇಶದ ವಿವಿಧ ಮೂಲೆಗಳಿಂದ ೩೨೪.೭೧ ಮೆಟ್ರಿಕ್ ಟನ್ ಆಮ್ಲಜನಕ ಹೊತ್ತ ೩ ಎಕ್ಸ್‌ಪ್ರೆಸ್ ರೈಲುಗಳು ನಗರಕ್ಕೆ ಆಗಮಿಸಿದ್ದು ಕೊರತೆ ನೀಗಿಸಲು ರಾಜ್ಯ ಸರ್ಕಾರಕ್ಕೆ ಸಾಥ್ ನೀಡಿವೆ.
ರಾತ್ರಿಯಿಂದ ಬೆಳಗ್ಗೆ ತನಕ ಒಡಿಶಾ, ಜಾರ್ಖಂಡ್ ಮತ್ತು ಮಹಾರಾಷ್ಟ್ರ ದಿಂದ ಮೂರು ವಿಶೇಷ ರೈಲುಗಳು ನಗರದ ವೈಟ್ ಫೀಲ್ಡ್ ರೈಲು ನಿಲ್ದಾಣಕ್ಕೆ ಆಗಮಿಸಿವೆ. ಒಡಿಶಾದ ರೌರ್ಕೆಲದಿಂದ ೮೫.೦೭ ಮೆ. ಟನ್ ಆಕ್ಸಿಜನ್ ಹೊತ್ತ ೨೦ ನೇ ರೈಲು ಬೆಂಗಳೂರಿಗೆ ರಾತ್ರಿ ೮.೨೫ಕ್ಕೆ ತಲುಪಿದ್ದು ಅದರ ಬೆನ್ನಲ್ಲೇ ಟಾಟಾ ನಗರದಿಂದ ೧೨೦ ಮೆ.ಟನ್ ಆಕ್ಸಿಜನ್ ಹೊತ್ತ ೨೧ ನೇ ಆಮ್ಲಜನಕ ರೈಲು ಬೆಂಗಳೂರಿಗೆ ಬೆಳಗಿನ ಜಾವ ೨.೪೦ ಕ್ಕೆ ತಲುಪಿದೆ.
ಮಹಾರಾಷ್ಟ್ರದ ರಾಯಗಡದಿಂದ ೧೧೯.೬೪ ಮೆ ಟನ್ ಆಕ್ಸಿಜನ್ ಹೊತ್ತ ೨೨ ನೇ ಎಕ್ಸ್ ಪ್ರೆಸ್ ರೈಲು ಬೆಂಗಳೂರಿಗೆ ಬೆಳಿಗ್ಗೆ ೮.೪೦ ಕ್ಕೆ ತಲುಪಿದೆ ಎಂದು ನೈರುತ್ಯ ರೈಲ್ವೆ ವಿಭಾಗ ತಿಳಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ರೈಲ್ವೆ ವಿಭಾಗ, ಕೊರೊನಾ ಸೋಂಕು ವಿರುದ್ದ ರಾಜ್ಯ ಸರ್ಕಾರ ಹೋರಾಡುತ್ತಿದೆ. ಅದಕ್ಕೆ ಬೆಂಬಲವಾಗಿ ರೈಲ್ವೆ ಸಚಿವಾಲಯ ಕೈಜೋಡಿಸಿದೆ. ಇದರ ಪರಿಣಾಮವಾಗಿ ಇದುವರೆಗೆ ೨೨ ವಿಶೇಷ ರೈಲುಗಳಲ್ಲಿ ಬೆಂಗಳೂರಿಗೆ ಆಮ್ಲಜನಕ ಹೊತ್ತು ತರಲಾಗಿದೆ ಎಂದು ತಿಳಿಸಿದೆ.
ಕರ್ನಾಟಕ ಮಾತ್ರವಲ್ಲದೆ ದೇಶದ ವಿವಿಧ ರಾಜ್ಯಗಳಿಗೆ ಅದರಲ್ಲೂ ಅಗತ್ಯವಿರುವ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆದ್ಯತೆ ಮೇರೆಗೆ ಆಮ್ಲಜನಕವನ್ನು ಪೂರೈಕೆ ಮಾಡಲಾಗುತ್ತಿದೆ. ಎಲ್ಲಾ ಕಡೆ ಸಿಗ್ನಲ್ ರಹಿತ ವ್ಯವಸ್ಥೆ ಮಾಡಲಾಗಿದೆ ಎಂದು ಕೂಡ ತಿಳಿಸಿದೆ.