೩೦ ಕಿ.ಮೀ. ನಡೆದು ಬಂದಿದ್ದ ಜೆಇಎಂ ಉಗ್ರರು

ನವದೆಹಲಿ,ನ.೨೨- ಜಮ್ಮು-ಕಾಶ್ಮೀರದ ನಗ್ರೋಟಾದಲ್ಲಿ ನಡೆದ ಎನ್‌ಕೌಂಟರ್ ಪ್ರಕರಣದಲ್ಲಿ ಪಾಕಿಸ್ತಾನದ ನಿಜ ಬಣ್ಣ ಮತ್ತೊಮ್ಮೆ ಬಟಾಬಯಲಾಗಿದೆ. ದಾಳಿಕೋರರು ಕಮಾಂಡೊ ತರಬೇತಿ ಪಡೆದವರಾಗಿದ್ದು, ಕತ್ತಲೆಯಲ್ಲಿ ಈ ನಾಲ್ವರು ಜೆಇಎಂ ಸಂಘಟನೆಯ ಭಯೋತ್ಪಾದಕರು ಭಾರತದ ಒಳಗೆ ನುಗ್ಗಿ ೩೦ ಕಿ.ಮೀವರೆಗೂ ನಡೆದುಕೊಂಡು ಬಂದಿರುವ ಘಟನೆ ಇದೀಗ ಬಹಿರಂಗವಾಗಿದೆ.
ನ. ೧೯ ರಂದು ನಡೆದ ಈ ಘಟನೆಯ ಹೆಜ್ಜೆ ಜಾಡನ್ನು ಬೆನ್ನತ್ತಿದಾಗ ಈ ಅಂಶಗಳು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಈ ಗುಂಡಿನ ಕಾಳಗದಲ್ಲಿ ಜೆಇಎಂ ಸಂಘಟನೆಯ ಕಮಾಂಡರ್ ಖಾಸಿಂಜಾನ್ ಹತನಾಗಿದ್ದು, ಈತ ಪಟಾಣ್‌ಕೋಟ್‌ನ ವಾಯು ನೆಲೆಯ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ.
ಖಾಸಿಂಜಾನ್ ಜೆಇಎಂ ಸಂಘಟನೆಯ ಉಗ್ರರು ಹಾಗೂ ಈತನ ಜತೆ ಸಂಪರ್ಕ ಹೊಂದಿರುವವರ ದಕ್ಷಿಣ ಕಾಶ್ಮೀರದಲ್ಲಿ ಕಾರ್ಯನಿರತರಾಗಿದ್ದಾರೆ ಎಂಬ ಅಂಶವು ಬೆಳಕಿಗೆ ಬಂದಿದೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಗಡಿಯೊಳಕ್ಕೆ ನುಸುಳಲು ಯತ್ನಿಸುತ್ತಿರುವ ಉಗ್ರರ ವಿರುದ್ಧ ಭಾರತೀಯ ಸೇನಾ ಪಡೆಗಳು ಗಡಿ ಭಾಗದಲ್ಲಿ ಹದ್ದಿನ ಕಣಿಟ್ಟಿದೆ.
ಮುಂಬೈ ಮಾದರಿ ದಾಳಿ ನಡೆಸಲು ನಾಲ್ವರು ಜೆಇಎಂ ಸಂಘಟನೆಯ ಭಯೋತ್ಪಾದಕರು ದಾಳಿ ನಡೆಸಲು ಪಿತೂರಿ ನಡೆಸಿ ಭಾರತದ ಗಡಿಯೊಳಕ್ಕೆ ನುಸುಳಿದ್ದರು. ಆದರೆ, ಈ ಸಂಚನ್ನು ಸೇನಾ ಪಡೆಗಳು ವಿಫಲಗೊಳಿಸುವಲ್ಲಿ ಯಶಸ್ವಿಯಾಯಿತು.