೩೦೦ ಕೋಟಿ ವೆಚ್ಚದಲ್ಲಿ ಆರೋಗ್ಯ ಅವಿಷ್ಕಾರ

ಕಲಬುರಗಿ,ಮಾ. ೨: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಸುಮಾರು ೩೦೦ ಕೋಟಿ ರೂ. ಖರ್ಚು ಮಾಡುವ ಆರೋಗ್ಯ ಆವಿಷ್ಕಾರ ಯೋಜನೆ ರೂಪಿಸಲಾಗಿದ್ದು, ಇದರ ಅಡಿ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ ೪೬ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ ಎಂದು ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಡಾ.ಅಜಯಸಿಂಗ್ ಹೇಳಿದರು.
ಇಲ್ಲಿನ ಕೆ.ಕೆ.ಆರ್.ಡಿ.ಬಿ ಆಡಳಿತ ಕಚೇರಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಒಟ್ಟು ೪೬ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ ೩೩ ಕೆ.ಕೆ.ಆರ್.ಡಿ.ಬಿ ವತಿಯಿಂದ ಹಾಗೂ ಉಳಿದ ೧೩ ಕೇಂದ್ರಗಳಿಗೆ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಖನಿಜ ನಿಧಿ ಬಳಸಿಕೊಂಡು ನಿರ್ಮಿಸಲಾಗುವುದು ಎಂದರು.
ಪ್ರತಿ ಪಿ.ಎಚ್.ಸಿ. ನಿರ್ಮಾಣಕ್ಕೆ ಕನಿಷ್ಠ ರೂ.೫ ಕೋಟಿ ವೆಚ್ಚವಾಗಲಿದೆ. ಮುಂದಿನ ಮೂರು ತಿಂಗಳಲ್ಲಿ ಈ ನಿಟ್ಟಿನಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ವಿವರಿಸಿದರು. ಮುಂದಿನ ಹಣಕಾಸು ವರ್ಷದಲ್ಲಿ ಪುನಃ ೩೨ ಪಿ.ಎಚ್.ಸಿ ಕಟ್ಟಡಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಲಾಗುವುದು ಎಂದು ಡಾ.ಅಜಯಸಿಂಗ್ ನುಡಿದರು.
ಆರೋಗ್ಯ ಸೌಧ ನಿರ್ಮಾಣ ಪ್ರಸ್ತುತ ಜಯದೇವ ಹೃದ್ರೋಗ ಸಂಶೋಧನಾ ಕೇಂದ್ರದ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿರುವ ಸ್ಥಳದ ಹಿಂಭಾಗದಲ್ಲಿ ಆರೋಗ್ಯ ಇಲಾಖೆಯ ಎಲ್ಲ ಕಟ್ಟಡಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸಲು ಅನುಕೂಲ ಆಗುವಂತೆ ಆರೋಗ್ಯ ಸೌಧ ನಿರ್ಮಿಸಲಾಗುತ್ತಿದೆ ಎಂದು ಡಾ.ಅಜಯಸಿಂಗ್ ಪ್ರಕಟಿಸಿದರು. ಈ ಉದ್ದೇಶಕ್ಕಾಗಿ ಕೆ.ಕೆ.ಆರ್.ಡಿ.ಬಿ ವತಿಯಿಂದ ರೂ.೧೦ ಕೋಟಿ ಹಾಗೂ ಆರೋಗ್ಯ ಇಲಾಖೆಯ ರೂ.೧೮ ಕೋಟಿ ಸೇರಿಸಿ ಒಟ್ಟು ೧೮ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು.ಇನ್ನು ಜಯದೇವ ಆಸ್ಪತ್ರೆ ಲೋಕಾರ್ಪಣೆಗೊಂಡ ನಂತರ ಕೆ.ಕೆ.ಆರ್.ಡಿ.ಬಿಯಿಂದ ರೂ. ೧೬ ಕೋಟಿ ೪೦ ಲಕ್ಷ ವೆಚ್ಚದಲ್ಲಿ ೪೮ ಆಂಬ್ಯುಲೆನ್ಸ್ ಖರೀದಿಸಿ ಸಂಸ್ಥೆಯೊಂದಿಗೆ ಕೈ ಜೋಡಿಸಿ ಕಾರ್ಯನಿರ್ವಹಿಸಲಾಗುವುದು ಎಂದು ವಿವರಿಸಿದರು.