೩ನೇ ಹಂತ ಮೆಟ್ರೊ ಅನುಮತಿಗೆ ಸಿಎಂ ಆಗ್ರಹ

ವಿಸ್ತರಿತ ಮಾರ್ಗ ಉದ್ಘಾಟನೆ
ಕೆ.ಆರ್ ಪುರದಿಂದ ಬೈಯಪ್ಪನಹಳ್ಳಿ, ಕೆಂಗೇರಿಯಿಂದ ಚಲ್ಲಘಟ್ಟದವರೆಗೆ ಮೆಟ್ರೋ ರೈಲು ವಿಸ್ತೃತ ಮಾರ್ಗವನ್ನು ಪ್ರಧಾನಿ ನರೇಂದ್ರಮೋದಿ ಅವರು ಇಂದು ವರ್ಚುಯಲ್ ಮೂಲಕ ಉದ್ಘಾಟಿಸಿದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್‌ರವರು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ವರ್ಚುಯಲ್ ಸಭೆಯಲ್ಲಿ ಭಾಗವಹಿಸಿದ್ದರು. ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಪ್ರೊ. ರಾಜೀವ್‌ಗೌಡ, ಶಾಸಕ ಎಸ್.ಟಿ ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ಬೆಂಗಳೂರು, ಅ. ೨೦- ಬೆಂಗಳೂರು ನಾಗರಿಕರ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಬೆಂಗಳೂರು ಮೆಟ್ರೋ ರೈಲು ಯೋಜನೆಯ ೪೫ ಕಿ.ಮೀ.ಗಳ ಮೂರನೇ ಹಂತದ ಮೆಟ್ರೋ ಮಾರ್ಗಕ್ಕೆ ಅನುಮೋದನೆ ನೀಡುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರಧಾನಿ ಮೋದಿ ಅವರನ್ನು ಕೋರಿದರು.
ಬೆಂಗಳೂರು ಮೆಟ್ರೋ ವಿಸ್ತರಿತ ಮಾರ್ಗದ ಉದ್ಘಾಟನೆಯನ್ನು ವರ್ಚ್ಯುಯಲ್ ಮೂಲಕ ಪ್ರಧಾನಿ ಮೋದಿ ಅವರು ಉದ್ಘಾಟಿಸಿದ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ೪೫ ಕಿ.ಮೀ. ಉದ್ದದ ಮೆಟ್ರೋ ಮೂರನೇ ಹಂತದ ನಿರ್ಮಾಣಕ್ಕೆ ಅಂದಾಜು ೧೫,೬೧೧ ಕೋಟಿ ರೂ.ಗಳು ವೆಚ್ಚವಾಗಲಿದ್ದು, ಈ ಸಂಬಂಧ ರಾಜ್ಯ ಸರ್ಕಾರ ಸಮಗ್ರ ಯೋಜನೆಯ ವರದಿ ತಯಾರಿಸಿ ಕೇಂದ್ರದ ಅನುಮೋದನೆಗೆ ಸಲ್ಲಿಸಿದೆ. ಈ ಯೋಜನೆಗೆ ಶೀಘ್ರ ಅನುಮೋದನೆ ನೀಡುವಂತೆ ಅವರು ಪ್ರಧಾನಿ ಮೋದಿ ಅವರನ್ನು ಕೋರಿದರು.ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದ ನಾಗರಿಕರಿಗೆ ಸಂಚಾರ ಸೌಲಭ್ಯವನ್ನು ಒದಗಿಸಲು ರಾಜ್ಯ ಸರ್ಕಾರ ೨೦೩೧ರ ವೇಳೆಗೆ ೩೧೭ ಕಿ.ಮೀ.ಗಳ ಮೆಟ್ರೋ ಮಾರ್ಗವನ್ನು ನಿರ್ಮಿಸಲು ಸಿಎಂಪಿ ಪ್ಲಾನ್‌ನಲ್ಲಿ ಅನುಮೋದಿಸಿದೆ. ಈಗಾಗಲೇ ೨೫೭ ಕಿ.ಮೀ.ಗಳ ಮಾರ್ಗವು ಕಾರ್ಯಾಚರಣೆ ನಿರ್ಮಾಣ ಮತ್ತು ಯೋಜನಾ ಹಂತದಲ್ಲಿದೆ. ಇನ್ನುಳಿದ ೬೦ ಕಿ.ಮೀ.ಗಳ ಮೆಟ್ರೋ ಮಾರ್ಗಗಳ ಕಾರ್ಯಸಾಧ್ಯತೆಯ ಸಮೀಕ್ಷೆಗಳನ್ನು ಶೀಘ್ರದಲ್ಲೇ ಕೈಗೊಳ್ಳಲಾಗುವುದು ಎಂದರು.
ಮೆಟ್ರೋ ಮೂರನೇ ಹಂತದ ಜತೆಗೆ ಸರ್ಜಾಪುರದಿಂದ ಹೆಬ್ಬಾಳದವರೆಗೆ ೩೭ ಕಿ.ಮೀ. ಉದ್ದದ ಮೆಟ್ರೋ ರೈಲು ಹಂತ-೩ಎಗೆ ಸಮಗ್ರ ವರದಿ ಯೋಜನಾ ವರದಿಯನ್ನು ತಯಾರಿಸಲಾಗುತ್ತಿದೆ ಎಂದರು.ಕೇಂದ್ರದ ಪ್ರಧಾನ ಮಂತ್ರಿಗಳು, ವಸತಿ ಮತ್ತು ನಗರ ವ್ಯವಹಾರಗಳ ಸಚಿವರು ಸೇರಿದಂತೆ ಇನ್ನಿತರ ಸಚಿವರುಗಳು ಬೆಂಗಳೂರು ಅಭಿವೃದ್ಧಿಗೆ ಸಹಕರಿಸುತ್ತಿರುವುದಕ್ಕಾಗಿ ಎಲ್ಲರಿಗೂ ಧನ್ಯವಾದ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಮೆಟ್ರೋ ರೈಲು ಯೋಜನೆ ಮೊದಲ ಹಂತದ ೪೨ ಕಿ.ಮೀ. ಉದ್ದದ ಮಾರ್ಗವನ್ನು ೧೪,೧೩೩ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಆಗಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಈ ಮಾರ್ಗವನ್ನು ಲೋಕಾರ್ಪಣೆ ಮಾಡಿದರು. ಈ ಯೋಜನೆಗಾಗಿ ಕರ್ನಾಟಕ ಸರ್ಕಾರ ೫೬೩೦ ಕೋಟಿ ರೂ.ಗಳಷ್ಟು ವೆಚ್ಚ ಮಾಡಿದೆ. ಬೆಂಗಳೂರು ಮೆಟ್ರೋ ರೈಲು ಹಂತ ಯೋಜನೆ ೨ ರಲ್ಲಿ ೭೫.೦೬ ಕಿ.ಮೀ. ಉದ್ದದ ಮಾರ್ಗ ಹೊಂದಿದ್ದು, ಈ ಯೋಜನೆಗೆ ೩೦೬೯೫ ಕೋಟಿ ರೂ.ಗಳ ವೆಚ್ಚವಾಗಲಿದೆ. ಈಗಾಗಲೇ ಈ ಕಾಮಗಾರಿಗಳು ಭರದಿಂದ ಸಾಗಿವೆ. ಇದರಲ್ಲಿ ೩೨ ಕಿ.ಮೀ. ಉದ್ದದ ಮಾರ್ಗವನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲಾಗಿದೆ. ಪ್ರಸ್ತುತ ಬೆಂಗಳೂರು ಮೆಟ್ರೋ ಜಾಲದ ಕಾರ್ಯಾಚರಣೆಗೆ ೭೪ ಕಿ.ಮೀ. ಗೆ ಏರಿಕೆಯಾಗಿದೆ ಎಂದರು.
ನಾಗಸಂದ್ರದಿಂದ ಮಾದಾವರದವರೆಗಿನ ೩.೧೪ ಕಿಮೀ. ಉದ್ದದ ವಿಸ್ತರಣೆ ಮಾರ್ಗ ಮತ್ತು ಆರ್.ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ೧೯.೧೫ ಕಿ.ಮೀ. ಉದ್ದ ಹೊಸ ಮಾರ್ಗಗಳು ಮುಕ್ತಾಯ ಹಂತದಲ್ಲಿದ್ದು, ೨೦೨೪ರ ಏಪ್ರಿಲ್ ವೇಳೆಗೆ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲು ಯೋಜನೆ ರೂಪಿಸಲಾಗಿದೆ. ಹಾಗೆಯೇ ಕಾಳೇನಅಗ್ರಹಾರದಿಂದ ನಾಗವಾರದವರೆಗಿನ ೨೧.೨೬ ಕಿ.ಮೀ. ಗಳ ಉದ್ದ ಹೊಸ ಮಾರ್ಗವನ್ನು ಮಾರ್ಚ್ ೨೦೨೫ ರ ವೇಳೆಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ಮೆಟ್ರೋ ೨ನೇ ಹಂತದ ಯೋಜನೆಗೆ ರಾಜ್ಯ ಸರ್ಕಾರ ೧೧,೫೮೩ ೦.೮ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದರು.
ಓಆರ್‌ಆರ್- ಏರ್‌ಪೋರ್ಟ್ ಮೆಟ್ರೋ ಎಂದೇ ಕರೆಯಲ್ಪಡುವ ೫೮ ಕಿ.ಮೀ. ಉದ್ದದ ಸೆಂಟ್ರೇಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಹೆಬ್ಬಾಳ ಜಂಕ್ಷನ್ ಮೂಲಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಂತ-೨ ಎ ಮತ್ತು ೨ ಬಿ ಯೋಜನೆಯನ್ನು ಅಂದಾಜು ೧೪೭೮೮ ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ೨೦೧೬ರ ವೇಳೆಗೆ ಈ ಮಾರ್ಗವನ್ನು ಪೂರ್ಣಗೊಳಿಸಲು ಯೋಜಿಸಲಾಗಿದೆ. ಇದುವರೆಗೂ ಈ ಮೆಟ್ರೋಗೆ ೪೭೭೫.೩೬ ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಪ್ರಯತ್ನದಿಂದ ಪ್ರಮುಖ ಎರಡು ಮಾರ್ಗಗಳಾದ ಕೃಷ್ಣರಾಜಪುರ-ಬೈಯ್ಯಪ್ಪನಹಳ್ಳಿ ನಡುವಿನ ೨.೧೦ ಕಿ.ಮೀ. ಉದ್ದ ಮತ್ತು ಕೆಂಗೇರಿಯಿಂದ ಚಲ್ಲಘಟ್ಟದವರೆಗಿನ ೨.೦೫ ಕಿ.ಮೀಗಳ ಉದ್ದದ ಮಾರ್ಗವನ್ನು ಕಳೆದ ಅಕ್ಟೋಬರ್ ೯ ರಂದು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗಿದೆ. ಇದರಿಂದ ನಗರದ ಪೂರ್ವದಿಂದ ಪಶ್ಚಿಮಕ್ಕೆ ತಡೆರಹಿತ ಸಂಪರ್ಕ ಸಾಧ್ಯವಾಗಿದೆ. ಮೆಟ್ರೋ ಜಾಲ ೭೪ ಕಿ.ಮೀ.ಗಳಿಗೆ ವಿಸ್ತರಿಸಿದೆ. ಪ್ರತಿದಿನ ೨ ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಹೇಳಿದರು.
ಈ ಮೆಟ್ರೋ ಯೋಜನೆಯಲ್ಲಿ ಕೆಲಸ ಮಾಡಿದ ಎಲ್ಲ ಗುತ್ತಿಗೆದಾರರಿಗೆ ಕಾರ್ಮಿಕರಿಗೆ ಹಾಗೂ ಹಣಕಾಸು ಒದಗಿಸಿದ ಸಂಸ್ಥೆಗಳಿಗೆ ಧನ್ಯವಾದ ಹೇಳಿದ ಮುಖ್ಯಮಂತ್ರಿಗಳು, ರಾಜ್ಯದ ಸಮಗ್ರ ಅಭಿವೃದ್ಧಿಯೊಂದಿಗೆ ವೇಗವಾದ ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಗುರಿಗಳನ್ನು ಸಾಧಿಸುವ ಬಲವಾದ ಸಂಕಲ್ಪ ತಮ್ಮದಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.