೩ನೇ ದಿನವೂ ರೈತರ ಪ್ರತಿಭಟನೆ ಸಂಧಾನಕ್ಕೆ ಕೇಂದ್ರ ಕಸರತ್ತು

ನವದೆಹಲಿ, ಫೆ.೧೫-ರಾಷ್ಟ್ರ ರಾಜಧಾನಿಯಲ್ಲಿ ನವದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅನ್ನದಾತರ ಆಕ್ರೋಶ ಭುಗಿಲೆದ್ದಿದ್ದು, ದೆಹಲಿ ಚಲೋ ಇಂದು ೩ನೇ ದಿನಕ್ಕೆ ಕಾಲಿಟ್ಟಿದೆ. ಈ ಮಧ್ಯೆ ಕೇಂದ್ರ ಸರ್ಕಾರ ರೈತರ ಮುಖಂಡರ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಮುಂದಾಗಿದೆ. ಈ ಹಿಂದೆ ನಡೆಸಿದ ಎರಡನೇ ಸುತ್ತಿನ ಮಾತುಕತೆ ಮುರಿದುಬಿದ್ದಿತ್ತು.ದೆಹಲಿಯ ಗಡಿಗಳಲ್ಲಿ ಭಾರಿ ಬಿಗಿಭದ್ರತೆ ಮುಂದುವರಿಸಲಾಗಿದೆ. ಭದ್ರತಾ ಪಡೆಗಳ ಬ್ಯಾರಿಕೇಡ್ ರೈತರಿಗೆ ತಡೆ ಹಾಕಿದೆ. ರೈತರು ದೆಹಲಿಯೊಳಗೆ ನುಗ್ಗದಂತೆ ಉಕ್ಕಿನ ಕೋಟೆ ನಿರ್ಮಾಣವಾಗಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.ನಿನ್ನೆ ರೈತ ಮುಖಂಡರುಗಳ ಜೊತೆ ಕೇಂದ್ರ ಸರ್ಕಾರ ಮಾತುಕತೆ ನಡೆಸಿತ್ತು.ಆದರೆ ಮಾತುಕತೆ ಸಫಲ ಆಗಿಲ್ಲ. ರೈತರ ಬೇಡಿಕೆಗೆ ಕೇಂದ್ರ ಸರ್ಕಾರ ಮಣೆ ಹಾಕುತ್ತಿಲ್ಲ.ಹೀಗಾಗಿ ಇವತ್ತು ರೈತರ ಜೊತೆ ೩ನೇ ಸುತ್ತಿನ ಮಾತುಕತೆಯನ್ನು ಸರ್ಕಾರ ನಿಗದಿಪಡಿಸಿದೆ.
ಇನ್ನು ಕೇಂದ್ರ ಸರ್ಕಾರದ ಜೊತೆ ಮಾತುಕತೆಯ ಬಳಿಕ ದೆಹಲಿ ಚಲೋ ಮುಂದುವರಿಸುವ ನಿರ್ಧಾರ ಮಾಡಲಾಗುವುದು ಎಂದು ರೈತ ಮುಖಂಡರು ಹೇಳಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿದ ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್, ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಮತ್ತು ಇತರ ಇಬ್ಬರು ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ನಿತ್ಯಾನಂದ ರೈ ಅವರು ನಗರದಲ್ಲಿ ಪ್ರತಿಭಟನೆ ನಿರತ ರೈತರ ಪ್ರತಿನಿಧಿಗಳನ್ನು ಗುರುವಾರ ಸಂಜೆ ೫ ಗಂಟೆಗೆ ಭೇಟಿ ಮಾಡಲಿದ್ದಾರೆ ಎಂದರು.ಶಾಂತಿಯುತ ಪ್ರತಿಭಟನೆ ನಡೆಸಿದರೂ ಡ್ರೋನ್‌ಗಳನ್ನು ಬಳಸಲಾಗಿದ್ದು, ಅಶ್ರುವಾಯು ಶೆಲ್‌ಗಳು ಮತ್ತು ರಬ್ಬರ್ ಗುಂಡುಗಳನ್ನು ಹಾರಿಸಲಾಗಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.ನಮ್ಮ ಮೇಲೆ ದಾಳಿ ಮಾಡಿದ್ದು ಪೋಲೀಸರಲ್ಲ, ಅರೆಸೇನಾ ಪಡೆಗಳು. ಇಷ್ಟೆಲ್ಲಾ ಆದರೂ ನಾವು ಕೇಂದ್ರ ಸರ್ಕಾರದೊಂದಿಗೆ ಮಾತನಾಡಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
ಕಾನೂನು ಖಾತರಿ ಕನಿಷ್ಠ ಬೆಂಬಲ ಬೆಲೆ, ಸಾಲ ಮನ್ನಾ ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನಕ್ಕಾಗಿ ರೈತರು ಒತ್ತಾಯಿಸಿದ್ದಾರೆ. ಸುಮಾರು ೨೦೦ ರೈತ ಸಂಘಗಳ ಬೆಂಬಲವನ್ನು ಹೊಂದಿರುವ ಸುಮಾರು ೧ ಲಕ್ಷ ರೈತರು ದೆಹಲಿಯತ್ತ ಪಾದಯಾತ್ರೆ ಆರಂಭಿಸಿದ್ದಾರೆ.