೨.೮೭ ಕೋಟಿ ಡ್ರಗ್ಸ್ ವಶ ನಾಲ್ವರ ಸೆರೆ

ನಗರದ ಸಿಸಿಬಿ ಪೊಲೀಸರು ಓರ್ವ ವಿದೇಶಿ ಡ್ರಗ್ ಪೆಡ್ಲರ್‌ನನ್ನು ಬಂಧಿಸಿ ಆತನಿಂದ ವಶಪಡಿಸಿಕೊಂಡಿರುವ ೨ ಕೋಟಿ ರೂ. ಬೆಲೆಬಾಳುವ ಮಾದಕ ವಸ್ತುಗಳನ್ನು ನಗರ ಪೊಲೀಸ್ ಆಯುಕ್ತ ದಯಾನಂದರವರು ಪರಿಶೀಲನೆ ನಡೆಸಿದರು. ಪೊಲೀಸ್ ಅಧಿಕಾರಿಗಳು ಇದ್ದಾರೆ.

ಬೆಂಗಳೂರು, ಏ.೫-ಮಾದಕ ವಸ್ತು ಸರಬರಾಜು,ಮಾರಾಟ,ಸೇವನೆ ವಿರುದ್ಧ ಸಮರ ಸಾರಿರುವ ನಗರ ಪೋಲೀಸರು ಇಬ್ಬರು ವಿದೇಶಿ ಪ್ರಜೆಗಳು ಸೇರಿ ನಾಲ್ವರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿ ೨.೮೭ ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಐವರಿ ಕೋಸ್ಟ್ ನ ಶೇಖ ಗಿಸ್ಲಾನ್ ಟಾನೋ(೩೩)ತೆಲಂಗಾಣದ ಆರ್ ಆರ್ ಜಿಲ್ಲೆಯ ಸರ್ವಾರ್ ನಗರದ ರಾಮೇಗೌಡ(೩೮) ಹೈದರಾಬಾದ್ ನ ಅಬೂಬಕರ್ ಖುರೇಷಿ(೩೪)ಹಾಗೂ ಕೀನ್ಯಾದ ಮೌವಾ ನಗರದ ಕೈಲಿಕ್ತಾ ಜಾಬ್(೩೬)ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು.
ಬೊಮ್ಮನಹಳ್ಳಿಯ ಹೊಂಗಸಂದ್ರದ ಬಳಿ ಐವರಿ ಕೋಸ್ಟ್ ನ ಶೇಖ ಗಿಸ್ಲಾನ್ ಟಾನೋ ಬಾಡಿಗೆಗೆ ಮನೆ ಮಾಡಿಕೊಂಡು ಡ್ರಗ್ಸ್ ಮಾರಾಟ ಮಾಡುತ್ತಿದ್ದ ಖಚಿತವಾದ ಮಾಹಿತಿಯನ್ನು ಆಧರಿಸಿ ದಾಳಿ ನಡೆಸಿದ ಸಿಸಿಬಿ ಮಾದಕ ದಮ್ಮ ನಿಗ್ರಹ ದಳದ ಅಧಿಕಾರಿಗಳು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನಿಂದ ೨ಕೋಟಿ ಮೌಲ್ಯದ ೬೭೦ ಗ್ರಾಂ ವೈಟ್ ಕ್ರಿಸ್ಟಲ್ ,೯೨೬ ಗ್ರಾಂ ಬ್ರೌನ್ ಕ್ರಿಸ್ಟಲ್,೧೧೨ ಗ್ರಾಂ ಯಲ್ಲೋ ಕ್ರಿಸ್ಟಲ್,೩೧೦ ಗ್ರಾಂ ಪಿಂಕ್ ಕಿಸ್ಟಲ್ ಸೇರಿ ೨ ಕೆಜಿ ೨೪ ಗ್ರಾಂ ತೂಕದ ಡ್ರಗ್ಸ್, ಮೊಬೈಲ್, ಹಾಗೂ ವೇಯಿಂಗ್ ಮೆಷಿನ್‌ನನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದರು.
ಬಂಧಿತ ಆರೋಪಿಯು ೨೦೨೨ ನೇ ಸಾಲಿನಲ್ಲಿ ಬ್ಯುಸಿನೆಸ್ ವೀಸಾದಲ್ಲಿ ಭಾರತಕ್ಕೆ ಬಂದು. ಮುಂಬಯಿ ಹಾಗೂ ದೆಹಲಿಯಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದನು.
ನಂತರ ಬೆಂಗಳೂರಿಗೆ ಬಂದು ತನಗೆ ಪರಿಚಯವಿರುವ ವ್ಯಕ್ತಿಗಳ ಜೊತೆಗೆ ಸೇರಿಕೊಂಡು ನಿಷೇಧಿತ ಮಾದಕ ವಸ್ತು ಎಂಡಿಎಂಎ ಕ್ರಿಸ್ಟಲ್ ಅನ್ನು ಕಡಿಮೆ ಬೆಲೆಗೆ ಖರೀದಿ ಮಾಡಿಕೊಂಡು ನಗರದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಈತನ ವಿರುದ್ಧ ಈ ಹಿಂದೆ ೨೦೨೨ನೇ ಸಾಲಿನಲ್ಲಿ ಶಂಕರಪುರಂ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್.ಪ್ರಕರಣ ದಾಖಲಾಗಿ ನ್ಯಾಯಾಂಗ ಬಂಧನದಲ್ಲಿದ್ದು,ನಂತರ ಜಾಮೀನಿನ ಬಿಡುಗಡೆಯಾಗಿ ಬಂದರೂ ಹಳೆ ಚಾಳಿ ಬಿಡದೇ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಎಂದರು.

೮೫೦ ಗ್ರಾಂ ಕೊಕೇನ್ ಜಪ್ತಿ:
ನಿಷೇಧಿತ ಮಾದಕ ವಸ್ತು ಕೊಕೇನ್ ಮಾರಾಟ ಮಾಡುತ್ತಿದ್ದ ತೆಲಂಗಾಣದ ಆರ್ ಆರ್ ಜಿಲ್ಲೆಯ ಸರ್ವಾರ್ ನಗರದ ರಾಮೇಗೌಡ ಹೈದರಾಬಾದ್ ನ ಅಬೂಬಕರ್ ಖುರೇಷಿಯನ್ನು ದೇವನಹಳ್ಳಿ ಪೊಲೀಸರು ಬಂಧಿಸಿ ೮೦ ಲಕ್ಷ ಬೆಲೆ ಬಾಳುವ ೮೫೦ ಗ್ರಾಂ ಕೊಕೇನ್ ವಶಪಡಿಸಿಕೊಂಡಿದ್ದಾರೆ.
ಇವರ ಜೊತೆಗೆ ಕೊಕೇನ್ ಮಾರಾಟದಲ್ಲಿ ತೊಡಗಿದ್ದ ಮತ್ತೊಬ್ಬ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದು ದಯಾನಂದ್ ತಿಳಿಸಿದರು.
ಕಳೆದ ಏ.೧ ರಂದು ದೇವನಹಳ್ಳಿಯ ಪ್ರಸನ್ನಹಳ್ಳಿ ರಸ್ತೆಯಲ್ಲಿ ಕೊಕೇನ್‌ನನ್ನು ಆರೋಪಿಗಳು ಸಾರ್ವಜನಿಕರಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮಾಹಿತಿಯ ಆಧರಿಸಿ ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿದೆ.
೭ ದಿನ ಪೊಲೀಸ್ ವಶಕ್ಕೆ:
ಬಂಧಿತರಿಂದ ೮೦ ಲಕ್ಷ ಮೌಲ್ಯದ ೩೫೦ ಗ್ರಾಂ ತೂಕದ ಕೊಕೇನ್, ಎರಡು ಮೊಬೈಲ್ ಗಳು, ಒಂದು ಎಲೆಕ್ಟ್ರಾನಿಕ್ ತೂಕದ ಯಂತ್ರ ಒಂದು ಬ್ಯಾಗ್ ಹಾಗೂ ೮೫ ಪ್ಲಾಸ್ಟಿಕ್ ಜಿಪ್ ಕವರ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ೭ ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಹೆಚ್ಚಿನ ತನಿಖೆಯನ್ನು ಮುಂದುವರೆಸಲಾಗಿದೆ ಎಂದರು.
ಈ ಕಾರ್ಯಾಚರಣೆಯನ್ನು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ಮಾರ್ಗದರ್ಶನದಲ್ಲಿ, ದೇವನಹಳ್ಳಿ ಎಸಿಪಿ ನವೀನ್ ಕುಮಾರ ರವರ ನೇತೃತ್ವದಲ್ಲಿ ನಡೆಸಲಾಗಿದೆ ಎಂದು ಹೇಳಿದರು.
ವಿದೇಶಿ ಪೆಡ್ಲರ್ ಸೆರೆ:
ಮಾದಕ ವಸ್ತು ಕೊಕೇನ್ ಮಾರಾಟ ಮಾಡುತ್ತಿದ್ದ ಕೀನ್ಯಾದ ಕೈಲಿಕ್ತಾ ಜಾಬ್ ನನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಬಂಧಿಸಿ ಆರು ಲಕ್ಷದ ಐವತ್ತು ಸಾವಿರ ಮೌಲ್ಯದ ೮೧ ಗ್ರಾಂ ಕೊಕೇನ್,೨,೨೦೦ ರೂ ನಗದನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಆರೋಪಿಯು ಚನ್ನಮ್ಮನಕೆರೆ ಅಚ್ಚುಕಟ್ಟು ತ್ಯಾಗರಾಜನಗರದ ಬಿ.ಬಿ.ಎಂ.ಪಿ ಆಟದ ಮೈದಾನದಲ್ಲಿ ಕೊಕೇನ್‌ನನ್ನು ಯುವಕರಿಗೆ ಮತ್ತು ಸಾರ್ವಜನಿಕರಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮಾಹಿತಿಯ ಆಧರಿಸಿ ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾದ ರಮಣ್ ಗುಪ್ತ, ಚಂದ್ರಗುಪ್ತ, ಡಿಸಿಪಿಗಳಾದ ಲಕ್ಷ್ಮಿಪ್ರಸಾದ್ ಅವರಿದ್ದರು.