2.5 ಲಕ್ಷ ಸರ್ಕಾರಿ ಹುದ್ದೆ ಭರ್ತಿ

ರಾಜ್ಯೋತ್ಸವ ಘೋಷಣೆ
ಬೆಂಗಳೂರು,ನ.೧- ರಾಜ್ಯಸರ್ಕಾರದಲ್ಲಿ ಖಾಲಿ ಇರುವ ೨.೫ ಲಕ್ಷ ಹುದ್ದೆಗಳನ್ನು ಮುಂದಿನ ೨ ವರ್ಷಗಳಲ್ಲಿ ಭರ್ತಿ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿದ್ದ ೬೭ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಲಾಗುವುದು, ಈ ವರ್ಷ ೧ ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಹೇಳಿದರು.
ಹುದ್ದೆಗಳು ತುಂಬಿ ಕನ್ನಡಿಗರ ಕೈಗಳಿಗೆ ಉದ್ಯೋಗ ದೊರೆತು ಆರ್ಥಿಕ ಬಲ ತುಂಬಿದಂತಾಗುತ್ತದೆ. ಹಾಗೆಯೇ ಶೈಕ್ಷಣಿಕ ಔದ್ಯೋಗಿಕ ಕ್ರಾಂತಿಯಾಗಲಿದೆ ಎಂದರು.
ಎಲ್ಲ ರಂಗದಲ್ಲೂ ಕನ್ನಡ ಬಳಕೆ ಕಾನೂನಿಗೆ ಮುಂದಿನ ಅಧಿವೇಶನದಲ್ಲಿ ಅನುಮೋದನೆ ಪಡೆದು ಜಾರಿ ಮಾಡಲಾಗುವುದು, ಕನ್ನಡ ಕಡ್ಡಾಯಕ್ಕೆ ಕಾನೂನಿನ ಕವಚ ನೀಡಿರುವ ಸರ್ಕಾರ ನಮ್ಮದು ಎಂದರು.
ನಾಳೆ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದೆ. ೭ ಲಕ್ಷ ಕೋಟಿ ಬಂಡವಾಳ ರಾಜ್ಯಕ್ಕೆ ಹರಿದು ಬರಲಿದೆ, ಇದರಿಂದ ೩.೫ ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತದೆ. ೭ ಲಕ್ಷ ಕೋಟಿ ಬಂಡವಾಳ ಬಂದರೆ ಕರ್ನಾಟಕ ಸಂಪದ್ಭರಿತವಾಗಲಿದೆ ಎಂದರು.
ಕನ್ನಡ ಒಂದು ಭಾಷೆಯಾಗದೆ ಬದುಕು ಆಗಬೇಕು, ಕನ್ನಡಕ್ಕಾಗಿ ನಾವು ಬದುಕುತ್ತೇವೆ, ಕನ್ನಡಕ್ಕಾಗಿ ನಾವು ಕೈ ಎತ್ತುತ್ತೇವೆ ಎಂಬ ಸಂಕಲ್ಪ ಎಲ್ಲರದ್ದಾಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಂಠೀರವ ಕ್ರೀಡಾಂಗಣದಲ್ಲಿ ೬೭ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿದರು. ಸಚಿವ ಬಿ.ಸಿ. ನಾಗೇಶ್, ಸಂಸದ ಪಿ.ಸಿ. ಮೋಹನ್ ಹಾಗೂ ಶಾಸಕ ರಿಜ್ವಾನ್ ಅರ್ಷದ್ ಮತ್ತಿತರರು ಇದ್ದಾರೆ.

ಕನ್ನಡವೇ ನಮ್ಮ ಉಸಿರು, ಕನ್ನಡವೇ ನಮ್ಮ ಸರ್ವಸ್ವ ಎಂದು ಸಾರಿದ ಮುಖ್ಯಮಂತ್ರಿಗಳು, ನಾವೆಲ್ಲರೂ ಕನ್ನಡಿಗರೆಂಬ ಹೆಮ್ಮೆಯಿಂದ ಮುನ್ನಡೆಯಬೇಕು, ನಮ್ಮ ಮಕ್ಕಳು ವಿಶ್ವದಲ್ಲೇ ಹೆಸರು ಮಾಡಬೇಕು, ನವ ಕರ್ನಾಟಕದಿಂದ ನವ ಭಾರತ ಸೃಷ್ಟಿಯಾಗಲಿ ಎಂದು ಕರೆ ನೀಡಿದರು.
ನುಗ್ಗು ನಡೆ ಮುಂದು, ನುಗ್ಗು ನಡೆ ಮುಂದು ಎಂದು ಮುನ್ನಡೆಯೋಣ, ಕನ್ನಡ ನಮ್ಮ ಉಸಿರು, ಪ್ರಧಾನಿ ಮೋದಿ ಅವರು ಎಲ್ಲ ಪ್ರಾದೇಶಿಕ ಭಾಷೆಗಳಿಗೂ ಮಾನ್ಯತೆ ನೀಡಿದ್ದಾರೆ. ಕನ್ನಡವೇ ನಮ್ಮ ಮಾತೃ ಭಾಷೆ ಅಲ್ಲ, ನಮ್ಮ ರಾಷ್ಟ್ರ ಭಾಷೆಯೂ ಆಗಿದೆ ಎಂದು ಪರೋಕ್ಷವಾಗಿ ಹಿಂದಿ ಹೇರಿಕೆ ಬಗ್ಗೆ ದನಿ ಎತ್ತಿರುವ ನಾಯಕರುಗಳಿಗೆ ತಿರುಗೇಟು ನೀಡಿದರು.
ಭಾರತದ ಭವಿಷ್ಯ ಬರೆಯುವ ಶಕ್ತಿ ಇರುವಂತದ್ದು, ಈ ಕನ್ನಡ ನಾಡಿಗೆ ಪ್ರತಿಯೊಬ್ಬ ಕನ್ನಡಿಗ ಕೂಡ ಆತ್ಮಾವಲೋಕನ ಮಾಡಿಕೊಂಡು ನಾಡು ಕಟ್ಟಲು ನನ್ನ ಶ್ರಮ ಏನು ಎಂದು ಯೋಚಿಸಬೇಕು, ಇದನ್ನು ಯೋಚಿಸಿದರೆ ವಿಶ್ವದಲ್ಲೇ ಕರ್ನಾಟಕ ಅತ್ಯಂತ ಶ್ರೇಷ್ಠ ನಾಡಾಗಲಿದೆ ಎಂದರು.
ಹೊಸ ತಂತ್ರಜ್ಞಾನ, ವಿಜ್ಞಾನದಿಂದ ಎಲ್ಲರಿಗೂ ಉದ್ಯೋಗ, ಮೂಲಭೂತ ಸೌಕರ್ಯ ಒದಗಿಸಿ ಒಂದು ಸುಂದರ ನಾಡು ಕಟ್ಟಬೇಕು, ಎಲ್ಲ ರಂಗದಲ್ಲೂ ಕನ್ನಡದ ಧ್ವಜವನ್ನು ಆರಿಸಬೇಕು ಎಂದ ಅವರು, ಇವತ್ತು ನಮ್ಮ ಮುಂದೆ ಬಹಳ ಸವಾಲುಗಳಿವೆ. ಆ ಸವಾಲುಗಳಿಗೆ ನಮ್ಮ ಸಾಹಿತಿಗಳು ಸ್ಫೂರ್ತಿದಾಯಕ ಪರಿಹಾರ ಕೊಟ್ಟಿದ್ದಾರೆ ಎಂದರು.
ಕರ್ನಾಟಕದಲ್ಲಿ ಬುದ್ಧಿವಂತರಿಗೆ ಕೊರತೆ ಇಲ್ಲ, ಹೆಚ್ಚು ಜ್ಞಾನಪೀಠ ಪ್ರಶಸ್ತಿ ದೊರಕಿರುವುದು ಕನ್ನಡ ನಾಡಿನ ಹಿರಿಯರಿಗೆ, ನಮ್ಮ ಹಿರಿಯರು ಸುಂದರವಾದ ಬದುಕನ್ನು ಕಟ್ಟಿಕೊಟ್ಟು ಹೋಗಿದ್ದಾರೆ. ನಾವು ಅದನ್ನು ಉಳಿಸಿಕೊಂಡು ಹೋಗಬೇಕು, ಸುಸಂಸ್ಕೃತ ಗುಣವನ್ನು ಉಳಿಸಿಕೊಳ್ಳಬೇಕು ಎಂದರು.
ಕನ್ನಡ ನಾಡು ಪುಣ್ಯದ ಬೀಡು, ಈ ನಾಡಲ್ಲಿ ಹುಟ್ಟಬೇಕಾದರೆ ಏಳು ಜನ್ಮದ ಪುಣ್ಯ ಮಾಡಿರಬೇಕು. ಇಲ್ಲಿ ಯಾವುದಕ್ಕೂ ಕೊರತೆ ಇಲ್ಲ, ಇಲ್ಲಿಯ ನಿಸರ್ಗ ಎಲ್ಲವೂ ಕನ್ನಡ ನಾಡಿಗೆ ದೊರಕಿದೆ. ಕರ್ನಾಟಕವನ್ನು ಒಂದು ರಾಜ್ಯವನ್ನಾಗಿ ಮಾಡಿರುವ ಹಿರಿಯರನ್ನು ಮರೆಯಲು ಸಾಧ್ಯವಿಲ್ಲ ಎಂದರು.
ಕರ್ನಾಟಕದಲ್ಲಿ ೧೦ ಕೃಷಿ ವಲಯಗಳಲ್ಲಿ ಒಂದಲ್ಲ ಒಂದು ಕಡೆ ವರ್ಷದ ೩೬೫ ದಿನವೂ ಕೃಷಿ ನಡೆಯುತ್ತದೆ. ಈ ರೀತಿ ಬೇರೆ ಯಾವ ರಾಜ್ಯಗಳಲ್ಲೂ ಇಲ್ಲ, ವರುಣನ ಆರ್ಶೀವಾದದಿಂದ ಅಂತರ್ಜಲ ಕೊರತೆ ನೀಗಿದೆ ಎಂದರು.ಪ್ರವಾಹ ಬಂದಾಗ ಸರ್ಕಾರ ಎರಡುಪಟ್ಟು ಪರಿಹಾರ ಕೊಟ್ಟಿದೆ. ಇದನ್ನು ಬೇರೆ ಯಾವ ರಾಜ್ಯದಲ್ಲೂ ಮಾಡಿಲ್ಲ. ಎಲ್ಲಿ ಕಷ್ಟವಿದೆ ಅಲ್ಲಿಗೆ ಧಾವಿಸುವ ಜೀವಂತಿಕೆಯನ್ನು ಸರ್ಕಾರ ತೋರಿದೆ ಎಂದರು.ಜ್ಞಾನ ಮತ್ತೆ ಜ್ಞಾನದ ಉದ್ಯೋಗ ಅತೀ ಹೆಚ್ಚು ಇರುವುದು ಕರ್ನಾಟದಲ್ಲಿ, ಇದೊಂದು ಜ್ಞಾನದ ಬೀಡು, ಈ ಮಣ್ಣಿನ ಕಣ ಕಣದಲ್ಲೂ ದುಡಿಮೆ ಇದೆ. ದುಡ್ಡೇ ದೊಡ್ಡಪ್ಪ ಅಲ್ಲ, ದುಡಿಮೆಯೇ ದೊಡ್ಡಪ್ಪ, ದುಡಿಮೆಯ ವರ್ಗಕ್ಕೆ ಉದ್ಯೋಗ ಕೊಟ್ಟಿದ್ದೇವೆ. ರೈತನ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಕೊಟ್ಟಿದ್ದೇವೆ. ರೈತರಲ್ಲದೆ ೬ ಲಕ್ಷ ಕೂಲಿ ಕಾರ್ಮಿಕರಿಗೂ ಯೋಜನೆ ರೂಪಿಸಿದ್ದೇವೆ.
ಆ ಮಕ್ಕಳಿಗೆ ಸ್ವಾಭಿಮಾನದ ಬದುಕು ಆಗಬೇಕು, ಇದೇ ನಮ್ಮ ಆಶಯ ಎಂದರು.

ಕನ್ನಡ ಕಾನೂನು
ಕನ್ನಡವನ್ನು ಉಳಿಸಿ ಬೆಳೆಸಲು ಆಡಳಿತದಲ್ಲಿ, ದೈನಂದಿನ ಜೀವನದಲ್ಲಿ ಕನ್ನಡದ ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕನ್ನಡ ಬಳಕೆ ಕಡ್ಡಾಯ ಕಾನೂನಿಗೆ ಮುಂದಿನ ಅಧಿವೇಶನದಲ್ಲಿ ಅನುಮೋದನೆ ಪಡೆದು ಅದನ್ನು ಜಾರಿ ಮಾಡುತ್ತೇವೆ. ಈಗಾಗಲೇ ಹಿಂದಿನ ಅಧಿವೇಶನದಲ್ಲಿ ಇದನ್ನು ಮಂಡಿಸಿದ್ದೇವೆ. ಮುಂದಿನ ಅಧಿವೇಶನದಲ್ಲಿ ಈ ಕಾನೂನಿಗೆ ಒಪ್ಪಿಗೆ ಪಡೆದು ಜಾರಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಘೋಷಿಸಿದರು.
ಕನ್ನಡಕ್ಕೆ ಕಾನೂನಿನ ಕವಚವನ್ನು ಕೊಟ್ಟಿರುವ ಪ್ರಪ್ರಥಮ ಸರ್ಕಾರ ತಮ್ಮದು, ಈ ಕಾನೂನಿನ ಬಗ್ಗೆ ಸಾರ್ವಜನಿಕ ಚರ್ಚೆಯಾಗಲಿ. ಎಲ್ಲರ ಸಲಹೆಯನ್ನು ಮುಕ್ತವಾಗಿ ಸ್ವೀಕರಿಸಲಾಗುವುದು ಎಂದು ಹೇಳಿದರು.