೨.೫ಕೋಟಿ ಅನುದಾನ ಬಿಡುಗಡೆ

ಗಲಗ ಗ್ರಾಮ : ಸಿಸಿ ರೋಡ್ ಚರಂಡಿ ಕಾಮಗಾರಿಗೆ ಜಾಗ ಪರಿಶೀಲನೆ
ದೇವದುರ್ಗ.ಆ.೦೩- ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನರಳುತ್ತಿರುವ ತಾಲೂಕಿನ ಗಲಗ ಗ್ರಾಮದ ಸಮಗ್ರ ಅಭಿವೃದ್ಧಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಹಾಗೂ ಶಾಸಕರ ವಿಶೇಷ ಅನುದಾನದಡಿ ೨.೫ಕೋಟಿ ರೂ. ಮಂಜೂರಾಗಿದೆ.
ಲೋಕೋಪಯೋಗಿ ಇಲಾಖೆ ಕಿರಿಯ ಇಂಜಿನಿಯರ್ ಚಂದ್ರಕಾಂತ, ಶಾಸಕರ ಸೂಚನೆ ಮೇರೆಗೆ ಸೋಮವಾರ ಗ್ರಾಮಕ್ಕೆ ಭೇಟಿನೀಡಿ ವಿವಿಧ ಭಾಗದಲ್ಲಿ ಸ್ಥಳ ಪರಿಶೀಲನೆ ಮಾಡಿದರು. ಗ್ರಾಮದ ಎಲ್ಲ ಕಡೆ ಸುಸಜ್ಜಿತ ಒಳಚರಂಡಿ ನಿರ್ಮಿಸಿ, ಸಿಸಿ ರಸ್ತೆ ನಿರ್ಮಾಣ ಮಾಡಲು ಕೆಕೆಆರ್‌ಡಿಬಿ ಹಾಗೂ ಶಾಸಕರ ವಿಶೇಷ ಅನುದಾನಡಿ ೨.೫ಕೋಟಿ ರೂ. ಮಂಜೂರಾಗಿದೆ. ಜತೆಗೆ ಮಲದಕಲ್ ಗ್ರಾಮದಲ್ಲೂ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ೨ಕೋಟಿ ರೂ. ಅನುದಾನ ನೀಡಲಾಗಿದೆ. ಸ್ಥಳ ಪರಿಶೀಲನೆ ನಡೆಸಿ ಇಲಾಖೆಗೆ ವರದಿ ನೀಡಲಾಗುವುದು ಎಂದು ಹೇಳಿದರು.
ನಾಲ್ಕೈದು ಹಳ್ಳಿ, ದೊಡ್ಡಿ, ತಾಂಡಾ ಒಳಗೊಂಡ ಗಲಗ ಗ್ರಾಪಂ ಹಲವು ಸಮಸ್ಯೆಗಳಿಂದ ನರಳುತ್ತಿತ್ತು. ಅದರಲ್ಲೂ ಗಲಗ ಗ್ರಾಮವನ್ನು ಚರಂಡಿ ನೀರು ಯಮನಂತೆ ಕಾಡುತ್ತಿದ್ದು, ಹಳ್ಳದಂತೆ ಊರಿನ ಮಧ್ಯದಲ್ಲಿ ಹರಿಯುತ್ತಿತ್ತು. ಮಳೆಗಾಲ ಬಂದರೆ ಬಹುತೇಕ ನರಕದಂತೆ ಪ್ರಾಸವಾಗುತ್ತಿದ್ದು, ಸಾಂಕ್ರಾಮಿಕ ರೋಗಿಗಳನ್ನು ಹರಡುತ್ತಿತ್ತು.
ಗ್ರಾಮದ ಸಮಸ್ಯೆಗಳ ಕುರಿತು ಕೆಲ ತಿಂಗಳ ಹಿಂದೆ ವಿಜಯವಾಣಿ ಗ್ರಾಮ ಸಂಚಾರ ಸುದ್ದಿ ಮಾಡಿ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿತ್ತು. ಅಂದು ವರದಿಗೆ ಎಚ್ಚೆತ್ತಿದ್ದ ಗ್ರಾಪಂ ಅಲ್ಲಲ್ಲಿ ಮರಂ ಹಾಕಿ ಕೈತೊಳೆದುಕೊಂಡಿತ್ತು. ಈಗ ಗ್ರಾಮದಲ್ಲಿ ಬಸ್ ನಿಲ್ದಾಣದಿಂದ ಶ್ರೀಚನ್ನಬಸವೇಶ್ವರ ಮಠದ ಗುಡ್ಡದವರೆಗೆ ಒಳಚರಂಡಿ, ಸಿಸಿ ರಸ್ತೆ ನಿರ್ಮಾಣಕ್ಕೆ ಮುಹೂರ್ತ ಕೂಡಿಬಂದಿದ್ದು, ಗ್ರಾಮಸ್ಥರು ನೆಮ್ಮದಿ ನಿಟ್ಟುಸಿರು ಬಿಡುವಂತಾಗಿದೆ.
ಈಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ಪ್ರಭುಲಿಂಗ ಪಾಟೀಲ್, ಗ್ರಾಮಸ್ಥರಾದ ಶಿವಪುತ್ರ ಮಲದಕಲ್, ತಿರುಪತಿ ಗಲಗ, ಬಸವರಾಜ ಗಲಗ ಇತರರಿದ್ದರು