೨ ಸಾವಿರ ವೈದ್ಯರ ನೇಮಕಕ್ಕೆ ಶೀಘ್ರವೇ ಕ್ರಮ: ಸಚಿವ ಸುಧಾಕರ್

ಮಣಿಪಾಲ, ಮಾ.೩೧- ರಾಜ್ಯದಲ್ಲಿ ಎರಡು ಸಾವಿರ ವೈದ್ಯರು ಹಾಗೂ ೭೦೦ ರಿಂದ ೮೦೦ ಮಂದಿ ಪ್ಯಾರಾ ಮೆಡಿಕಲ್, ನರ್ಸಿಂಗ್ ಸಿಬ್ಬಂದಿಯನ್ನು ತಿಂಗಳೊಳಗೆ ನೇರ ನೇಮಕಾತಿ ಮಾಡಿಕೊಳ್ಳುವ ನಿರ್ಧಾರ ಮಾಡಲಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಕೋವಿಡ್ ಎರಡನೇ ಅಲೆಯಲ್ಲಿ ಸೋಂಕಿತರ ಹೆಚ್ಚಳ ತ್ವರಿತಗತಿಯಲ್ಲಿ ಕಂಡುಬರುತ್ತಿರುವ ಉಡುಪಿ ಜಿಲ್ಲೆಗೆ ಆಗಮಿಸಿ ದಿನವಿಡೀ ಆಸ್ಪತ್ರೆಗಳಿಗೆ ಭೇಟಿ, ಕಂಟೈನ್‌ಮೆಂಟ್ ವಲಯಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಿತಿಗಳನ್ನು ಅವಲೋಕಿಸಿದ ಬಳಿಕ, ಸಂಜೆ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಅವರು ಸುದ್ದಿಗಾರ ರೊಂದಿಗೆ ಮಾತನಾಡುತಿದ್ದರು. ೨೦೦೦ ವೈದ್ಯರನ್ನು ನೇರ ನೇಮಕಾತಿಯ ಮೂಲಕ ಕೆಲಸಕ್ಕೆ ತೆಗೆದುಕೊಂಡು ಈಗ ರಾಜ್ಯದಲ್ಲಿ ಖಾಲಿ ಇರುವ ಎಲ್ಲಾ ಪ್ರಾಥಮಿಕ, ಸಮುದಾಯ, ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳನ್ನು ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಇನ್ನು ಒಂದೂವರೆ ತಿಂಗಳೊಳಗೆ ಈ ನೇಮಕಾತಿ ನಡೆಯಲಿದೆ ಎಂದರು. ಅದೇ ರೀತಿ ೭೦೦ರಿಂದ ೮೦೦ ಮಂದಿ ಪ್ಯಾರಾ ಮೆಡಿಕಲ್, ನರ್ಸಿಂಗ್, ಫಾರ್ಮಸಿಸ್ಟ್ ಹುದ್ದೆಗಳ ಭರ್ತಿಗೂ ನೇರ ನೇಮಕಾತಿ ಮಾಡಿಕೊಳ್ಳಲು ಸಚಿವ ಸಂಪುಟದ ಒಪ್ಪಿಗೆ ಪಡೆಯಲಾಗಿದೆ. ಶೀಘ್ರವೇ ಇವುಗಳಿಗೂ ನೇಮಕಾತಿ ನಡೆಯಲಿದೆ ಎಂದು ಡಾ.ಸುದಾಕರ ವಿವರಿಸಿದರು. ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರಲು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದ್ದು, ಸರಕಾರಿ ಆಸ್ಪತ್ರೆಗಳು ಖಾಸಗಿಗಿಂತ ಉತ್ತಮ ವಾಗಿ ಕೆಲಸ ನಿರ್ವಹಿಸಲು ಬೇಕಾದ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಇನ್ನು ಮುಂದೆ ಪ್ರತೀ ಬುಧವಾರ ರಾಜ್ಯದ ಎಲ್ಲಾ ಸರಕಾರಿ ಆಸ್ಪತ್ರೆ ಸಿಬ್ಬಂದಿಗೆ ‘ಪರಿಶೀಲನಾ ದಿನ’ (ಇನ್‌ಸ್ಪೆಕ್ಷನ್ ಡೇ) ಆಗಿರುತ್ತದೆ. ಆರೋಗ್ಯ ಇಲಾಖೆಯ ವೈದ್ಯರು ಸೇರಿದಂತೆ ಎಲ್ಲರೂ ತಮ್ಮ ಕೆಳಗಿನ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಬೇಕು ಎಂದು ಸಚಿವರು ತಿಲಿಸಿದರು. ಇದರಿಂದ ಆಸ್ಪತ್ರೆಯ ಗುಣಮಟ್ಟ ಹೆಚ್ಚಲು ಸಾಧ್ಯವಾಗಲಿದೆ ಎಂದವರು ನುಡಿದರು. ಅಲ್ಲದೇ ಎಲ್ಲಾ ವೈದ್ಯರು ತಮ್ಮ ಕೆಲಸದ ಬಗ್ಗೆ ಪ್ರತಿದಿನ ಡೈರಿಯನ್ನು ಬರೆದಿಡಬೇಕು. ಈ ಡೈರಿಯನ್ನು ಪರಿಶೀಲಿಸಿ ಅವರ ಭಡ್ತಿ, ವೇತನ ಹೆಚ್ಚಳವನ್ನು ನಿರ್ಧರಿಸಲಾಗುತ್ತದೆ ಎಂದ ಅವರು, ಜಿಲ್ಲೆಯ ೧೩ ಲಕ್ಷ ಜನಸಂಖ್ಯೆಗೆ ಈವರೆಗೆ ೭ ಲಕ್ಷ ಮಂದಿಗೆ ಮಾತ್ರ ಆರೋಗ್ಯ ಕಾರ್ಡ್ ನೀಡಲಾಗಿದೆ. ಇನ್ನು ಮೂರು ತಿಂಗಳೊಳಗೆ ಜಿಲ್ಲೆಯ ಉಳಿದ ೬ ಲಕ್ಷ ಮಂದಿಗೆ ಆರೋಗ್ಯ ಕಾರ್ಡ್ ವಿತರಿಸುವ ಗುರಿಯನ್ನು ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಡಾ.ಸುಧಾಕರ್ ತಿಳಿಸಿದರು. ತಾನು ಕೋವಿಡ್ ಅದಿಕ ಸಂಖ್ಯೆಯಲ್ಲಿ ಕಂಡುಬಂದ ಎಂಐಟಿ ಕ್ಯಾಂಪಸ್ ಸೇರಿದಂತೆ ಹಲವು ಕಡೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಪಾಸಿಟಿವ್ ಸಂಖ್ಯೆ ಹೆಚ್ಚಿದರೂ ಸಾವು ಸಂಭವಿಸಿಲ್ಲ. ಅಧಿಕ ಮಂದಿಗೆ ರೋಗದ ಲಕ್ಷಣಗಳಿಲ್ಲ. ಸೋಂಕಿನ ನಿಯಂತ್ರಣಕಕೆ ಜಿಲ್ಲಾಡಳಿತ ಇನ್ನಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದರು. ಮುಂದಿನ ೬೦ರಿಂದ ೯೦ ದಿನಗಳು ನಮಗೆ ಸವಾಲಿನ ದಿನಗಳಾಗಲಿವೆ. ಕೊರೋನ ನಿಯಂತ್ರಣದಲ್ಲಿ ನಾವು ಹೆಚ್ಚಿನ ಎಚ್ಚರಿಕೆ ವಹಿಸಬೇಕಿದೆ. ಪಾಸಿಟಿವ್ ಪ್ರಮಾಣ ಕಡಿಮೆ ಇರಿಸುವುದರೊಂದಿಗೆ ಸೋಂಕಿತರ ೨೦ರಿಂದ ೩೦ಮಂದಿ ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಿ ಅವರನ್ನು ಕೋವಿಡ್ ಪರೀಕ್ಷೆಗೊಳಪಡಿಸಿ ರೋಗವನ್ನು ನಿಯಂತ್ರಿಸಬೇಕು ಎಂದು ಸಲಹೆ ನೀಡಿದರು. ಹಿರಿಯ ನಾಗರಿಕರು ಹಾಗೂ ೪೫ ವರ್ಷ ಮೇಲಿನವರಿಗೆ ಲಸಿಕೆ ನೀಡುವ ಪ್ರಕ್ರಿಯೆಯನ್ನು ಇನ್ನಷ್ಟು ಚುರುಕುಗೊಳಿಸಬೇಕು. ಮನೆಯ ವಿದ್ಯಾವಂತರು ಹಿರಿಯರನ್ನು ಲಸಿಕೆಗೆ ಕರೆತರಲು ಪ್ರೋತ್ಸಾಹ ನೀಡಬೇಕು. ಜಿಲ್ಲೆಗಿರುವ ಅಂಬುಲೆನ್ಸ್, ಡಾಟಾ ಉಪಕರಣಗಳ ಕೊರೆಯನ್ನು ನೀಗಿಸಲು ತಾವು ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಡಿಸಿ ಜಿ.ಜಗದೀಶ್, ಸಿಇಓ ಡಾ.ನವೀನ್ ಭಟ್, ಶಾಸಕ ಕೆ.ರಘುಪತಿ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಜಿಪಂ ಅಧ್ಯಕ್ಷ ದಿನಕರ ಬಾಬು, ಮಟ್ಟಾರು ರತ್ನಾಕರ ಹೆಗ್ಡೆ ಉಪಸ್ಥಿತರಿದ್ದರು.