೨ ಶತಕೋಟಿ ಲಸಿಕೆ ಮಂದಿಗೆ ಬಿಲ್‌ಗೇಟ್ಸ್ ಪ್ರಶಂಸೆ

ನವದೆಹಲಿ,ಜು.೨೦- ಭಾರತದಲ್ಲಿ ೨ ಶತಕೋಟಿ ಕೋವಿಡ್ ಲಸಿಕೆ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಾಪ್ಟ್ ವೇರ್ ದಿಗ್ಗಜ ಬಿಲ್ ಗೇಟ್ಸ್ ಅಭಿನಂದಿಸಿದ್ದಾರೆ.
ಭಾರತ “೨೦೦ ಕೋಟಿ ಲಸಿಕೆ ನೀಡುವ ಮೂಲಕ ಮೈಲಿಗಲ್ಲು ದಾಟಿದೆ. ಇದಕ್ಕಾಗಿ ಪ್ರಧಾನಿಗೆ ಅಭಿನಂದನೆಗಳು. ಕೋವಿಡ್-೧೯ ರ ಪರಿಣಾಮ ತಗ್ಗಿಸಲು ಭಾರತೀಯ ಲಸಿಕೆ ತಯಾರಕರು ಮತ್ತು ಭಾರತ ಸರ್ಕಾರದೊಂದಿಗೆ ನಿರಂತರ ಪಾಲುದಾರಿಕೆಗಾಗಿ ಕೃತಜ್ಞರಾಗಿರುತ್ತೇವೆ” ಎಂದು ಬಿಲ್ ಗೇಟ್ಸ್ ಟ್ವೀಟ್ ಮಾಡಿದ್ದಾರೆ.
ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಮೇ ತಿಂಗಳಲ್ಲಿ ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನು ಭೇಟಿಯಾದಾಗ ದೇಶದ ಲಸಿಕಾ ಅಭಿಯಾನ ಶ್ಲಾಘಿಸಿದ್ದರು.
“ಡಾ. ಮನ್ಸುಖ್ ಮಾಂಡವಿಯಾ ಅವರನ್ನು ಭೇಟಿಯಾಗಲು ಮತ್ತು ಜಾಗತಿಕ ಆರೋಗ್ಯದ ದೃಷ್ಟಿಕೋನ ವಿನಿಮಯ ಮಾಡಿಕೊಳ್ಳಲು ಇದು ಸಕಾಲ. ಲಸಿಕಾ ಅಭಿಯಾನ ಭಾರತದ ಯಶಸ್ಸು ಮತ್ತು ಆರೋಗ್ಯದ ಫಲಿತಾಂಶ ಪ್ರಮಾಣದಲ್ಲಿ ಹೆಚ್ಚಿಸಲು ತಂತ್ರಜ್ಞಾನದ ಬಳಕೆ ಜಗತ್ತಿಗೆ ಅನೇಕ ಪಾಠ ಕಲಿಸಿದೆ ಎಂದು ಗೇಟ್ಸ್ ಹೇಳಿದ್ದರು.
ಕಳೆದ ವರ್ಷ ಜನವರಿಯಲ್ಲಿ ಭಾರತವು ವಿಶ್ವದ ಅತಿದೊಡ್ಡ ಕೋವಿಡ್ ಲಸಿಕೆ ಅಭಿಯಾನವನ್ನು ಪ್ರಾರಂಭಿಸಿತ್ತು.ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಅರ್ಹ ಫಲಾನುಭವಿಗಳಿಗೆ ಇದುವರೆಗೆ ೨೦೦.೫೯ ಕೋಟಿ ಡೋಸ್‌ಗಳನ್ನು ನೀಡಲಾಗಿದೆ.