೨ ವರ್ಷದ ಬಳಿಕ ಜಾಲತಾಣಕ್ಕೆ ತ್ರಂಪ್ ವಾಪಸ್

ನ್ಯೂಯಾರ್ಕ್, ಮಾ.೧೮- ಅಮೆರಿಕಾ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುತ್ತಿರುವ ಡೊನಾಲ್ಡ್ ಟ್ರಂಪ್ ಈಗಾಗಲೇ ತನ್ನ ಚುನಾವಣಾ ಪ್ರಚಾರ ಕಾರ್ಯಗಳನ್ನು ಆರಂಭಿಸಿದ್ದಾರೆ. ಇದಕ್ಕೆ ಮತ್ತಷ್ಟು ಬಲವೆಂಬಂತೆ ವಾರದ ಹಿಂದೆ ಟ್ರಂಪ್ ಅವರ ಸಾಮಾಜಿಕ ಜಾಲತಾಣಗಳ ಖಾತೆ ಫೇಸ್‌ಬುಕ್ ಅನ್ನು ಮರು ಸಕ್ರಿಯಗೊಳಿಸಲಾಗಿದ್ದು, ಇದೀಗ ಎರಡು ವರ್ಷಗಳ ಬಳಿಕ ಪೋಸ್ಟ್ ಮಾಡಿದ್ದಾರೆ.
ಕಳೆದ ವಾರವಷ್ಟೇ ಟ್ರಂಪ್ ಅವರ ಫೇಸ್‌ಬುಕ್ ಖಾತೆಯನ್ನು ಮರು ಸಕ್ರಿಯಗೊಳಿಸಲಾಗಿತ್ತು. ಇದೀಗ ಟ್ರಂಪ್ ಮೊದಲ ಬಾರಿ ಅವರು ಪೋಸ್ಟ್ ಮಾಡಿದ್ದು, ಹಳೆಯ ವಿಡಿಯೋವೊಂದನ್ನು ಕೂಡ ಹಂಚಿಕೊಂಡಿದ್ದಾರೆ. ಇದರಲ್ಲಿ ನಾನು ಮತ್ತೆ ಬಂದ್ದೇನೆ, ನಿಮ್ಮನ್ನು ಕಾಯಿಸುತ್ತಿರುವುದಕ್ಕೆ ಕ್ಷಮಿಸಿ, ಇದೊಂದು ಸಂಕೀರ್ಣವಾದ ವ್ಯವಹಾರ (ಅಧ್ಯಕ್ಷೀಯ ಚುನಾವಣೆ)ವಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಟ್ರಂಪ್ ಅವರು ಯ್ಯೂಟ್ಯೂಬ್‌ನಲ್ಲೂ ಕೂಡ ಇದೇ ವಿಡಿಯೋ ಹಂಚಿಕೊಂಡಿದ್ದಾರೆ. ಅಧ್ಯಕ್ಷೀಯ ಚುನಾವಣೆ ನಡೆದ ಬಳಿಕ ಯುಎಸ್ ಕ್ಯಾಪಿಟಲ್‌ನಲ್ಲಿ ನಡೆದ ದಾಂಧಲೆ ಹಿನ್ನೆಲೆಯಲ್ಲಿ ಟ್ರಂಪ್ ಅವರ ಎಲ್ಲಾ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ನಿರ್ಬಂಧಿಸಲಾಗಿತ್ತು. ಇದೀಗ ಫೇಸ್‌ಬುಕ್ ಖಾತೆಯನ್ನು ಮರುಸಕ್ರಿಯಗೊಳಿಸಲಾಗಿದೆ. ಅಲ್ಲದೆ ಟ್ವಿಟರ್ ಸಂಸ್ಥೆಯನ್ನು ಖರೀದಿಸಿದ ಬಳಿಕ ಎಲಾನ್ ಮಸ್ಕ್ ಕೂಡ ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ಕಳೆದ ವರ್ಷ ಮರುಸಕ್ರಿಯಗೊಳಿಸಿದ್ದರು. ಹಾಗಾಗಿ ಮುಂದಿನ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಎಲ್ಲಾ ಸಾಮಾಜಿಕ ಮಾಧ್ಯಮಗಳನ್ನು ಸಂಪೂರ್ಣವಾಗಿ ಬಳಸಿಕೊಂಡು, ಪ್ರಚಾರ ಕಾರ್ಯ ನಡೆಸುವ ಉತ್ಸಾಹದಲ್ಲಿದ್ದಾರೆ.