೨ ವರ್ಷದಲ್ಲಿ ಅನುಭವ ಮಂಟಪ ಕಾಮಗಾರಿ ಪೂರ್ಣ – ಸಿಎಂ

ಬೆಂಗಳೂರು, ಜ. ೬- ಇಡೀ ಜಗತ್ತಿಗೆ ಸಂಸತ್ ನ ಪರಿಕಲ್ಪನೆ ನೀಡಿದ ವಿಶ್ವಗುರು ಬಸವಣ್ಣ ಅವರ ಅನುಭವ ಮಂಟಪ ನಿರ್ಮಾಣಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಭೂಮಿಪೂಜೆ ನೆರವೇರಿಸಿ, ಇನ್ನೆರಡು ವರ್ಷಗಳಲ್ಲಿ ಅನುಭವ ಮಂಟಪ ಕಾಮಗಾರಿಗಳನ್ನು ಪೂರ್ಣಗೊಳಿಸುವುದಾಗಿ ಘೋಷಿಸಿದರು.
೧೨ನೇ ಶತಮಾನದ ಸಮಾಜ ಸುಧಾರಕ, ಕ್ರಾಂತಿ ಪುರುಷ, ಸಮಾನತೆಯ ಸಂದೇಶ ಸಾರಿದ ಅಣ್ಣ ಬಸವಣ್ಣ ಅವರ ಕರ್ಮಭೂಮಿಯಾದ ಬೀದರ್‌ನ ಬಸವ ಕಲ್ಯಾಣದಲ್ಲಿ ಸುಮಾರು ೬೦೦ ಕೋಟಿ ರೂ. ವೆಚ್ಚದಲ್ಲಿ ಈ ಅನುಭವ ಮಂಟಪ ನಿರ್ಮಾಣವನ್ನು ಕೈಗೊಳ್ಳಲಾಗುತ್ತಿದೆ.
ಈ ಐತಿಹಾಸಿದ ಅನುಭವ ಮಂಟಪ ಅತ್ಯಾಕರ್ಷಕ ರೀತಿಯಲ್ಲಿ ಇರಲಿದ್ದು, ಈ ಅನುಭವ ಮಂಟಪ ಅನೇಕ ವೈಶಿಷ್ಟ್ಯತೆಗಳನ್ನು ಹೊಂದಿದೆ. ಅನುಭವ ಮಂಟಪದ ಕಟ್ಟಡದ ತುದಿಯಲ್ಲಿ ಬೃಹತ್ ಲಿಂಗಾಕಾರದ ಗೋಪುರ ಇದ್ದು, ದಾಸೋಹ ಭವನ, ಬಯಲು ರಂಗಮಂದಿರ, ಥೀಮ್ ಟೆರೇಸ್ ಗಾರ್ಡನ್ ಸೇರಿದಂತೆ, ಸುಸಜ್ಜಿತ ವ್ಯವಸ್ಥೆಗಳು ಇರಲಿವೆ.
ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿ ಇಡೀ ಕಟ್ಟಡವನ್ನು ಹವಾನಿಯಂತ್ರಣಗೊಳಿಸಲಾಗಿದ್ದು, ಅತ್ಯುನ್ನತ ರೋಬೋಟಿಕ್ ವ್ಯವಸ್ಥೆಯು ಅನುಭವ ಮಂಟಪದಲ್ಲಿ ಇದೆ. ಈ ಅನುಭವ ಮಂಟಪ ಸುಮಾರು ೭.೫ ಎಕರೆ ವಿಸ್ತಾರದಲ್ಲಿ ತಲೆಎತ್ತಲಿದ್ದು, ಕಟ್ಟಡದ ವಿನ್ಯಾಸ ಅತ್ಯಾಕರ್ಷಕವಾಗಿರಲಿದೆ.
ಈ ಅನುಭವ ಮಂಟಪದ ಆವರಣದಲ್ಲಿ ಮಕ್ಕಳ ಉದ್ಯಾನ, ಸಂಗೀತ ಕಾರಂಜಿ, ಕಲ್ಯಾಣ ಮಂಟಪ ಮತ್ತು ವಾಣಿಜ್ಯ ಸಂಕೀರ್ಣ ಕಟ್ಟಡಗಳು ಇರಲಿವೆ. ಇಂದು ಬಸವ ಕಲ್ಯಾಣದಲ್ಲಿ ಅನುಭವ ಮಂಟಪದ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ೧೦೦ ಕೋಟಿ ರೂ. ಗಳನ್ನು ಬಿಡುಗಡೆ ಮಾಡಲಾಗಿದೆ. ೨೦೦ ಕೋಟಿ ರೂ. ಗಳ ಕಾಮಗಾರಿ ಟೆಂಡರ್ ಪ್ರಗತಿಯಲ್ಲಿದ್ದು, ೨ ವರ್ಷದಲ್ಲಿ ಕಟ್ಟಡ ಪೂರ್ಣಗೊಳ್ಳಲಿದೆ ಎಂದರು.
ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಬಾಲ್ಕಿ ಹಿರೇಮಠ ಸಂಸ್ಥಾನದ ಸ್ವಾಮೀಜಿಗಳಾದ ಡಾ. ಬಸವ ಪಟ್ಟದೇವರು ವಹಿಸಿದ್ದು, ಸಚಿವರಾದ ಆರ್. ಅಶೋಕ್, ಪ್ರಭು ಚವ್ಹಾಣ್, ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ, ಖ್ಯಾತ ಸಾಹಿತಿ ಗೊ.ರು. ಚನ್ನಬಸಪ್ಪ ಸೇರಿದಂತೆ, ಹಲವು ಗಣ್ಯರು ಉಪಸ್ಥಿತರಿದ್ದರು.

Spread the love