೨ ವರ್ಷಗಳಿಂದ ಬಳಸದ ಗೂಗಲ್ ಖಾತೆಗಳು ಡಿಲೀಟ್

ನವದೆಹಲಿ,ಮೇ.೧೭-ಕನಿಷ್ಠ ೨ ವರ್ಷಗಳಿಂದ ಬಳಸದ ವೈಯಕ್ತಿಕ ಗೂಗಲ್ ಖಾತೆಗಳು ಮತ್ತು ಅವುಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಡಿಲೀಟ್ ಮಾಡುವುದಾಗಿ ಗೂಗಲ್ ತಿಳಿಸಿದೆ.
ಗೂಗಲ್ ವರ್ಕ್ ಸ್ಪೇಸ್ (ಜಿಮೇಲ್, ಡಾಕ್ಸ್, ಡ್ರೈವ್, ಮೀಟ್, ಕ್ಯಾಲೆಂಡರ್), ಯೂಟ್ಯೂಬ್ ಮತ್ತು ಗೂಗಲ್ ಫೋಟೋಸ್‌ನ ನಿಷ್ಕ್ರಿಯ ಖಾತೆಗಳಲ್ಲಿನ ಮಾಹಿತಿಯನ್ನು ಅನ್ನು ಸಂಪೂರ್ಣವಾಗಿ ತೆಗೆದುಹಾಕುವುದಾಗಿ ಕಂಪನಿ ಹೇಳಿದೆ. ಕಂಪನಿಯ ಹೊಸ ನಿಯಮವು ನಿನ್ನೆಯಿಂದ ಜಾರಿಗೆ ಬಂದಿದ್ದರೂ, ನಿಷ್ಕ್ರಿಯ ಖಾತೆಗಳ ಮೇಲೆ ಇದು ತಕ್ಷಣ ಪರಿಣಾಮ ಬೀರುವುದಿಲ್ಲ. ಡಿಸೆಂಬರ್ ೨೦೨೩ ರ ನಂತರ ಹೊಸ ನಿಯಮವನ್ನು ಕಾರ್ಯರೂಪಕ್ಕೆ ತರುವ ಸಾಧ್ಯತೆ ಇದೆ.
ಹೊಸ ನೀತಿಯು ವೈಯಕ್ತಿಕ ಗೂಗಲ್ ಖಾತೆಗಳಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ಶಾಲೆಗಳು ಅಥವಾ ವ್ಯವಹಾರಗಳಂತಹ ಸಂಸ್ಥೆಗಳ ಖಾತೆಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಗೂಗಲ್‌ನಲ್ಲಿ ಉತ್ಪನ್ನ ನಿರ್ವಹಣೆ ವಿಭಾಗದ ವೈಸ್ ಪ್ರೆಸಿಡೆಂಟ್ ರುತ್ ಕ್ರಿಚೆಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಒಂದು ಖಾತೆಯನ್ನು ದೀರ್ಘಕಾಲದವರೆಗೆ ಬಳಸದಿದ್ದರೆ, ಅದು ದುರುಪಯೋಗವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮರೆತುಹೋದ ಅಥವಾ ಗಮನಿಸದ ಖಾತೆಗಳು ಸಾಮಾನ್ಯವಾಗಿ ಹಳೆಯ ಅಥವಾ ಮರು ಬಳಸಿದ ಪಾಸ್‌ವರ್ಡ್‌ಗಳನ್ನು ಹೊಂದಿರುತ್ತವೆ. ಹೀಗಾಗಿ ಹೆಚ್ಚಿನ ಸಂದರ್ಭಗಳಲ್ಲಿ ಇದು ದುರುಪಯೋಗವಾಗಬಹುದು ಎಂದು ಗೂಗಲ್ ವಿವರಿಸಿದೆ.
ಬಹಳ ಕಾಲದಿಂದ ನಿಷ್ಕ್ರಿಯವಾಗಿರುವ ಗೂಗಲ್ ಖಾತೆಗಳು ಟು ಸ್ಟೆಪ್ ವೆರಿಫಿಕೇಶನ್ ಭದ್ರತೆಯನ್ನು ಹೊಂದಿರುವ ಸಾಧ್ಯತೆ ೧೦ ಪಟ್ಟು ಕಡಿಮೆಯಾಗಿದೆ ಎಂದು ಗೂಗಲ್‌ನ ಆಂತರಿಕ ಪರಿಶೀಲನೆಯಲ್ಲಿ ಕಂಡು ಬಂದಿದೆ. ಹೀಗಾಗಿ ಇಂಥ ಖಾತೆಗಳು ದುರ್ಬಲವಾಗಿದ್ದು, ಬೇಗನೆ ಹ್ಯಾಕ್ ಆಗಬಹುದು. ಹ್ಯಾಕ್ ಆದ ಖಾತೆಗಳು ದುರುಪಯೋಗವಾಗಬಹುದು ಮತ್ತು ಸ್ಪ್ಯಾಮ್ ಮೇಲ್ ಕಳುಹಿಸಲು ಕೂಡ ಅವನ್ನು ಬಳಸಬಹುದು ಎಂದು ಕಂಪನಿ ತಿಳಿಸಿದೆ. ಇಂತಹ ಅಪಾಯವನ್ನು ತಡೆಗಟ್ಟಲು ಗೂಗಲ್‌ನ ಎಲ್ಲ ನಿಷ್ಕ್ರಿಯ ಉತ್ಪನ್ನಗಳ ವಿಚಾರದಲ್ಲಿ ನಾವು ೨ ವರ್ಷಗಳ ಮಿತಿಯನ್ನು ಜಾರಿಗೊಳಿಸುತ್ತಿದ್ದೇವೆ. ಈ ವಿಷಯದಲ್ಲಿ ನಾವು ಹಂತ ಹಂತವಾಗಿ ಮುನ್ನಡೆಯಲಿದ್ದೇವೆ. ಒಂದು ಬಾರಿ ಖಾತೆಯನ್ನು ರಚಿಸಿ ಮತ್ತೆ ಯಾವತ್ತೂ ಅದನ್ನು ಉಪಯೋಗಿಸದ ಖಾತೆಗಳಿಂದ ನಾವು ಕಾರ್ಯಾಚರಣೆ ಆರಂಭಿಸಲಿದ್ದೇವೆ ಎಂದು ಗೂಗಲ್ ತಿಳಿಸಿದೆ.