೨ ಪ್ರತ್ಯೇಕ ಕೊಲೆ ಪ್ರಕರಣ: ಐವರು ಆರೋಪಿಗಳ ಬಂಧನ

ಕುಣಿಗಲ್, ಡಿ. ೨೯- ಎರಡು ಪ್ರತ್ಯೇಕ ಕೊಲೆ ಪ್ರಕರಣಗಳನ್ನು ಬೇಧಿಸಿರುವ ತಾಲ್ಲೂಕಿನ ಹುಲಿಯೂರುದುರ್ಗ ಪೊಲೀಸರು ೬ ಮಂದಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ರಾಜೇಂದ್ರ ಪುರ ಅರಣ್ಯ ಪ್ರದೇಶದಲ್ಲಿ ಹಾಗೂ ಕಿಲಾರದಲ್ಲಿ ಕೊಲೆ ಮಾಡಿ ಪರಾರಿಗಿದ್ದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಹುಲಿಯೂರುದುರ್ಗ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಹುಲಿಯೂರುದುರ್ಗ-ಮಾಗಡಿ ಸಾರ್ವಜನಿಕ ರಸ್ತೆಯ ರಾಜೇಂದ್ರ ಪುರ ಅರಣ್ಯ ಪ್ರದೇಶಕ್ಕೆ ಹೋಗುವ ರಸ್ತೆಯಲ್ಲಿ ಈ ತಿಂಗಳ ೧೦ ರಂದು ಗುರುತು ಸಿಗದಂತೆ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ರಾಘವೇಂದ್ರನ ಮದ್ಯದ ಬಾಟಲ್ ಮೇಲಿರುವ ಲೇಬಲ್ ಬಿಚ್ಚಿಟ್ಟ ಸತ್ಯ ಸಂಗತಿಯನ್ನು ಹುಡುಕಲು ಹೊರಟ ಪೊಲೀಸರು ಅಬಕಾರಿ ಇಲಾಖೆಯ ಸಹಾಯದಿಂದ ಮಾಹಿತಿ ಪಡೆದು ಬಾರ್‌ನಿಂದ ಸಿಸಿ ಟಿವಿ ಪತ್ತೆಹಚ್ಚಿ ಮೃತನ ಹೆಂಡತಿ ದಿವ್ಯಾ ಕೃಷ್ಣ ಎಂಬಾತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಈತನೊಂದಿಗೆ ಸೇರಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಆರೋಪಿಗಳಾದ ಕೃಷ್ಣ ದೇವಲಾಪುರ ಹಾಗೂ ದಿವ್ಯಾ ತಿಪ್ಪನಹಳ್ಳಿ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಮತ್ತೊಂದು ಕೊಲೆ ಪ್ರಕರಣ ಕಿಲಾರದ ರೌಡಿಶೀಟರ್ ವಿನಯ್ ಎಂಬಾತನನ್ನು ವೈಯಕ್ತಿಕ ದ್ವೇಷಕ್ಕಾಗಿ ಕೊಲೆ ಮಾಡಿದ ೪ ಆರೋಪಿಗಳನ್ನು ಬಂಧಿಸಲಾಗಿದೆ ಕಿಲಾರ ಗ್ರಾಮದಲ್ಲಿ ಈ ತಿಂಗಳ ೨೧ ರಂದು ಗ್ರಾಮ ಪಂಚಾಯ್ತಿ ಚುನಾವಣೆ ಮುನ್ನದಿನ ರೌಡಿಶೀಟರ್ ವಿನಯ್ ಎಂಬಾತನನ್ನು ಸಂಚು ರೂಪಿಸಿ ಪ್ರಕಾಶ್, ಸತೀಶ, ಶಶಿಕಲಾ ಹಾಗೂ ನಿಂಗೇಗೌಡ ಎಂಬುವರು ಸೇರಿಕೊಂಡು ಕೊಲೆ ಮಾಡಿದ್ದರು. ಹಳೇ ವೈಯುಕ್ತಿಕ ದ್ವೇಷಕ್ಕಾಗಿ ಈ ಕೊಲೆ ಮಾಡಿರುವುದಾಗ ವಿಚಾರಣೆ ವೇಳೆ ಆರೋಪಿಗಳು ತಿಳಿಸಿದ್ದಾರೆ ಎಂದರು.
ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ನಿಂಗೇಗೌಡ ತಲೆಮರೆಸಿಕೊಂಡಿದ್ದು, ಪ್ರಕಾಶ್, ಸತೀಶ ಹಾಗೂ ಶಶಿಕಲಾ ಅವರನ್ನು ಬಂಧಿಸಲಾಗಿದೆ ಎಂದರು.
ಈ ಎರಡು ಕೊಲೆ ಪ್ರಕರಣಗಳನ್ನು ಬೇಧಿಸಿ ಆರೋಪಿಗಳನ್ನು ಪತ್ತೆಹಚ್ಚಲು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಉದೇಶ್, ಡಿವೈಎಸ್ಪಿ ಜಗದೀಶ್ ಮಾರ್ಗದರ್ಶನದಲ್ಲ ಶ್ರಮಿಸಿದ ಸಿಪಿಐ ಗುರುಪ್ರಸಾದ್, ಪಿಎಸ್‌ಐ ವೆಂಕಟೇಶ್ ಮತ್ತು ಸಿಬ್ಬಂದಿಗಳಾದ ಧನಂಜಯ, ನವೀನ್, ಹನುಮಂತಯ್ಯ, ರಂಗಸ್ವಾಮಿ, ನಂಜುಂಡಸ್ವಾಮಿ, ಹರೀಶ್, ಪುಟ್ಟರಾಮ, ನರಸಿಂಹರಾಜು, ವೆಂಕಟೇಶ್‌ರವರನ್ನೊಳಗೊಂಡ ತಂಡ ಕಾರ್ಯವೈಖರಿಯನ್ನು ಶ್ಲಾಘಿಸಿರುವ ಜಿಲ್ಲಾ ರಕ್ಷಣಾಧಿಕಾರಿಗಳು ಈ ಪೊಲೀಸ್ ತಂಡಕ್ಕೆ ನಗದು ಬಹುಮಾನ ನೀಡಿ ಅಭಿನಂದಿಸಿದ್ದಾರೆ.