೨ ಕ್ಷೇತ್ರಗಳಿಗೆ ರಾಹುಲ್ ಸ್ಪರ್ಧೆ ಬಿಜೆಪಿಗೆ ಖರ್ಗೆ ತಿರುಗೇಟು


ನವದೆಹಲಿ,ಮೇ.೪-ಕೇರಳದ ವಯನಾಡು ಮತ್ತು ಉತ್ತರ ಪ್ರದೇಶದ ರಾಯ್ ಬರೇಲಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸ್ಪರ್ಧೆ ಮಾಡಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರ ಟೀಕೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ.
೨೦೧೪ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಾಣಸಿ ಮತ್ತು ಗುಜರಾತ್‌ನ ವಡೋದರ ಕ್ಷೇತ್ರದಿಂದ ಸ್ಪರ್ಧಿಸಿರಲಿಲ್ಲವೇ. ಎರಡೂ ಸ್ಥಾನ ಗೆದ್ದ ನಂತರ ಒಂದು ಸ್ಥಾನ ತೆರವು ಮಾಡಿದ್ದರು. ರಾಹುಲ್ ಗಾಂಧಿ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ
ಪ್ರಧಾನಿ ನರೇಂದ್ರ ಮೋದಿ ಅವರು ಕ್ಷುಲ್ಲಕ ಮಾತುಗಳನ್ನಾಡಿ ತಮ್ಮ ಘನತೆ ಗೌರವಕ್ಕೆ ಚ್ಯುತಿ ಬರುವಂತೆ ನಡೆದುಕೊಳ್ಳುತ್ತಿದ್ದಾರೆ. ಇದನ್ನೆಲ್ಲಾ ನೋಡಿದರೆ ಪ್ರಧಾನಿ ಮೋದಿ ಭಯಭೀತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾಣಿ ಎರಡು ಲೋಕಸಭಾ ಕ್ಷೇತ್ರಗಳಿಂದ ನಾಮಪತ್ರ ಸಲ್ಲಿಸಿರಲಿಲ್ಲವೇ. ಹೀಗಿರುವಾಗ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ಥಾನದ ಘನತೆಗೆ ತಕ್ಕಂತೆ ನಡೆದುಕೊಳ್ಳಲಿ ಎಂದಿದ್ದಾರೆ
ಪ್ರಧಾನಿ ನರೇಂದ್ರ ಮೋದಿ ಅವರೇ ವಡೋದರ ಬಿಟ್ಟು ವಾರಾಣಸಿಗೆ ಓಡಿ ಹೋಗಿದ್ದಾರೆ. ಹೀಗಿರುವಾಗ ರಾಹುಲ್ ಗಾಂಧಿ ವಯನಾಡು ಬಿಟ್ಟು ರಾಯ್ ಬರೇಲಿಗೆ ಓಡಿಹೋಗಿದ್ದಾರೆ ಎಂದು ಹೇಳಿರುವುದು ಅವರಿಗಿರುವ ಭಯ ಸೂಚಿಸುತ್ತದೆ ಎಂದು ಖರ್ಗೆ ವ್ಯಂಗ್ಯವಾಡಿದರು.
ಪಶ್ಚಿಮ ಬಂಗಾಳದಲ್ಲಿ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿ, ವಯನಾಡಿನಲ್ಲಿ ಸೋಲಿನ ಭೀತಿಯಿಂದ ರಾಹುಲ್ ಗಾಂಧಿ ತಮಗಾಗಿ ಸುರಕ್ಷಿತ ಸ್ಥಾನಕ್ಕಾಗಿ ಹುಡುಕಾಟ ನಡೆಸುತ್ತಿದ್ದರು.ಹೀಗಾಗಿ ರಾಯ್ ಬರೇಲಿಗೆ ಬಂದಿದ್ದಾರೆ ಎಂದು ಟೀಕಿಸಿದ್ದರು
೨೦೧೯ ರಲ್ಲಿ ಅಮೇಥಿ ಲೋಕಸಭಾ ಕ್ಷೇತ್ರದಿಂದ ಸೋತ ಬಳಿಕ ಭಯಗೊಂಡು ಕೇರಳದ ವಯನಾಡಿಗೆ ಹೋಗಿದ್ದರು.ಈಗ ಅಲ್ಲಿ ಭಯಗೊಂಡು ರಾಯ್ ಬರೇಲಿಗೆ ಬಂದಿದ್ದಾರೆ ಎಂದು ಆರೋಪಿಸಿದ್ದರು.