೨ ಕೋಟಿ ರೂ ಹಣ ಜಪ್ತಿ

ಬೆಂಗಳೂರು, ಏ.೧೮-ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭಗೊಂಡಿರುವ ಬೆನ್ನಲ್ಲೇ ಕಾರ್ಯಾಚರಣೆ ತೀವ್ರಗೊಳಿಸಿರುವ ಚುನಾವಣಾಧಿಕಾರಿಗಳು ಹಾರೋಹಳ್ಳಿ ತಾಲೂಕಿನ ಗಂಟಕನದೊಡ್ಡಿ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದ ವಾಹನದಲ್ಲಿ ಸಾಗಿಸುತ್ತಿದ್ದ ೨ ಕೋಟಿ ಹಣ ಜಪ್ತಿ ಮಾಡಿದ್ದಾರೆ.
ರಾಮನಗರ ಎಸ್ ಪಿ ಕಾರ್ತಿಕ್ ರೆಡ್ಡಿ ಹಾಗು ಚುನಾವಣೆ ಅಧಿಕಾರಿ ಅವಿನಾಶ್ ಮೆನನ್ ರಾಜೇಂದ್ರ ನೇತೃತ್ವದಲ್ಲಿ ಎಟಿಎಂಗೆ ಹಣ ಹಾಕುವ ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಎರಡು ಕೋಟಿ ಹಣ ಜಪ್ತಿ ಮಾಡಲಾಗಿದೆ.ಎಟಿಎಂಗೆ ಹಣ ಹಾಕುವ ವಾಹನದಲ್ಲಿ ದಾಖಲೆ ಇಲ್ಲದೆ ನಿನ್ನೆ ಸಂಜೆ ೬ ಗಂಟೆ ಬಳಿಕ ಹಣ ಸಾಗಿಸುತ್ತಿದ್ದರಿಂದ ಅನುಮಾನಗೊಂಡ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಹಣ ಸಿಕ್ಕಿದೆ.ಸಾಗಿಸಲಾಗುತ್ತಿದ್ದ ಹಣಕ್ಕೆ ಅಗತ್ಯ ದಾಖಲೆ ಇಲ್ಲದ ಹಿನ್ನೆಲೆ ಹಣವನ್ನು ವಶಕ್ಕೆ ಪಡೆಯಲಾಗಿದೆ. ಗನ್‌ಮ್ಯಾನ್ ಇಲ್ಲದೆ ವಾಹನದಲ್ಲಿ ಹಣ ಸಾಗಿಸುತ್ತಿದ್ದ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಂಜಾ ಸಾಗಾಣೆ:
ಬೀದರ್ ಬಳಿ ಗಾಂಜಾ ಸಾಗಾಟ ಗ್ಯಾಂಗ್ ಮೇಲೆ ಖಚಿತವಾದ ಮಾಹಿತಿಯನ್ನು ಆಧರಿಸಿ ದಾಳಿ ಮಾಡಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಚಿಟಗುಪ್ಪಾ ತಾಲೂಕಿನ ಬೆಳಕೇರಾ ಬಳಿ ಕಾರಿನಲ್ಲಿ ಆಂಧ್ರಪ್ರದೇಶದಿಂದ ಬೀದರ್ ಮಾರ್ಗವಾಗಿ ಮುಂಬೈಗೆ ಗಾಂಜಾ ಸಾಗಿಸುತ್ತಿದ್ದ ಗ್ಯಾಂಗನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.ಬಂಧಿತರಿಂದ ೧.೫೬ ಕೋಟಿ ರೂ ಮೌಲ್ಯದ ಒಂದೂವರೆ ಕಿಂಟಾಲ್ ಗಾಂಜಾ ವಶಕ್ಕೆ ಪಡೆಯಲಾಗಿದೆ. ಕಾರ್ಯಚರಣೆ ನಡೆಸಿದ ಔರಾದ್ ಪೋಲಿಸರಿಗೆ ಬೀದರ್ ಎಸ್ಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.