೨೮ ಕ್ಷೇತ್ರಗಳ ಮತಗಟ್ಟೆ ಪ್ರಕ್ರಿಯೆಗೆ ಚಾಲನೆ

ಬೆಂಗಳೂರು, ಜ.೧೬- ಪ್ರಸ್ತುತ ವಾರ್ಷಿಕ ಸಾಲಿನಲ್ಲಿ ವಿಧಾನಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಬಿಬಿಎಂಪಿ ವ್ಯಾಪ್ತಿಯ ೨೮ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಇಂದಿನಿಂದ ಎಲ್ಲ ಮತಗಟ್ಟೆಗಳ ಪರಿಶೀಲನೆ ಪ್ರಕ್ರಿಯೆ ಆರಂಭವಾಗಿದೆ.
ಮಹದೇವಪುರ, ಬಿಟಿಎಂಲೇಔಟ್, ಶಾಂತಿನಗರ, ಕೆಆರ್ ಪುರಂ, ಶಿವಾಜಿನಗರ, ಚಾಮರಾಜಪೇಟೆ, ವಿಜಯನಗರ ಹಾಗೂ ಹೆಬ್ಬಾಳ ಸೇರಿದಂತೆ ಒಟ್ಟು ೨೮ ಕ್ಷೇತ್ರಗಳಲ್ಲೂ ಸಹಾಯಕ ಮತದಾನ ನೋಂದಣಾಧಿಕಾರಿಗಳು ಇಂದಿನಿಂದ ಪರಿಶೀಲನೆ ಕಾರ್ಯ ಪ್ರಾರಂಭಿಸಿದ್ದಾರೆ.
ಚಿಲುಮೆ ಸಂಸ್ಥೆ ಹಗರಣದಿಂದಾಗಿ ನೆನಗುದ್ದಿಗೆ ಬಿದ್ದಿದ್ದ ಬೆಂಗಳೂರಿನ ಶಿವಾಜಿನಗರ, ಮಹದೇವಪುರ ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡಿದ್ದು, ಮೂರು ಕ್ಷೇತ್ರಗಳಲ್ಲೂ ಒಟ್ಟು ೯,೮೦,೫೪೨ ಮತದಾರರಿದ್ದಾರೆ.
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-೨೦೨೩ರ ಅಂತಿಮ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ೨೫ ವಿಧಾನ ಸಭಾ ಕ್ಷೇತ್ರಗಳ ಪಟ್ಟಿಯನ್ನು ಜ.೫ ರಂದು ಪ್ರಕಟಿಸಲಾಗಿತ್ತು. ಇದೀಗ ಶಿವಾಜಿನಗರ, ಚಿಕ್ಕಪೇಟೆ ಹಾಗೂ ಮಹದೇವಪುರ ಮತದಾರರ ಪಟ್ಟಿ ಪ್ರಕಟಿಸಿದ್ದು, ೫೧೫೯೮೩ ಪುರುಷರು, ೪೬೪೪೧೫ ಮಹಿಳೆಯರು ಹಾಗೂ ೧೪೪ ತೃತೀಯ ಲಿಂಗಿಗಳು ಸೇರಿ ಒಟ್ಟು ೯,೮೦೫೪೨ ಮತದಾರರಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದರು.ಅಂತಿಮ ಪಟ್ಟಿಯಲ್ಲಿ ಶಿವಾಜಿನಗರ ಕ್ಷೇತ್ರದಲ್ಲಿ ೧,೯೪,೯೩೭, ಚಿಕ್ಕಪೇಟೆ ಕ್ಷೇತ್ರದಲ್ಲಿ ೨,೧೩,೦೬೬ ಹಾಗೂ ಮಹದೇವಪುರ ಕ್ಷೇತ್ರದಲ್ಲಿ ೫,೭೨,೫೩೯ ಮತದಾರರಿದ್ದಾರೆ.ಕಳೆದ ನವೆಂಬರ್ ೧೧ರಂದು ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ ಆಕ್ಷೇಪಣೆ ಸಲ್ಲಿಸಲು ಡಿ.೧೨ರವರೆಗೂ ಕಾಲಾವಕಾಶ ನೀಡಲಾಗಿದ್ದು, ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತಂತೆ ವಿಶೇಷ ಅಭಿಯಾನವನ್ನು ಈ ಮೂರು ಕ್ಷೇತ್ರಗಳಲ್ಲಿ ಕೈಗೊಳ್ಳಲಾಗಿತ್ತು. ಜನವರಿ ೬ರಂದು ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಿ ಇಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದರು.