ಮುಂಬೈ.ಜು.೧- ಪುಣೆ ತಲುಪಿದ ಬಳಿಕ ಮುಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಅವರೆಲ್ಲಾ ಸುಖನಿದ್ರೆಗೆ ಜಾರಿದ್ದರು. ಇನ್ನೇನು ಬೆಳಗ್ಗೆ ನಿಗದಿತ ಸ್ಥಳ ತಲುಪಬೇಕು ಎನ್ನುವಷ್ಟರಲ್ಲಿ ವಿಧಿಯಾಟವೇ ಬೇರೆಯಾಗಿತ್ತು. ಖಾಸಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮೂವರು ಮಕ್ಕಳು ಸೇರಿದಂತೆ ೨೬ ಮಂದಿ ಸುಟ್ಟು ಕರಕಲಾಗಿರುವ ಹೃದಯವಿದ್ರಾವಕ ಘಟನೆ ಮಹಾರಾಷ್ಟ್ರದಲ್ಲಿ ಸಂಭವಿಸಿದೆ.ಈ ದುರ್ಘಟನೆಯಲ್ಲಿ ೭ ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಅಗ್ನಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಧಗಧಗನೆ ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಲು ಹರಸಾಹಸ ಪಡಬೇಕಾಯಿತು. ಇದರಿಂದಾಗಿ ಸ್ಥಳದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿ ಬೆಂಕಿಯ ಕೆನ್ನಾಲಿಗೆ ಬಾನೆತ್ತರಕ್ಕೆ ಚಾಚಿಕೊಂಡಿತ್ತು. ಅಗ್ನಿಶಾಮಕ ಸಿಬ್ಬಂದಿ ಹೋರಾಟ ನಡೆಸಿ ಬೆಂಕಿಯನ್ನು ನಂದಿಸುವಷ್ಟರಲ್ಲೇ ೨೬ ಜನರ ಪ್ರಾಣಪಕ್ಷಿ ಹಾರಿಹೋಗಿತ್ತು.
ಬಸ್ಸಿಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಪ್ರಯಾಣಿಕರ ಚೀರಾಟ, ಆಕ್ರಂದನ ಮುಗಿಲು ಮುಟ್ಟಿತ್ತು. ಆದರೆ, ಗಾಬರಿಯಿಂದಾಗಿ ಏನು ಮಾಡಬೇಕೆಂಬುದೇ ತೋಚದೆ ಬೆಂಕಿಯ ಕೆನ್ನಾಲಿಗೆಗೆ ಮತ್ತು ಉಸಿರುಗಟ್ಟಿ ೨೬ ಮಂದಿ ಸಾವನ್ನಪ್ಪಿದ್ದಾರೆ. ಆದರೆ, ಕೆಲವರು ಕಿಟಕಿಯ ಗಾಜುಗಳನ್ನು ಹೊಡೆದು ಹೊರ ಬರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೂ ಈ ವೇಳೆ ಗಂಭೀರ ಸ್ವರೂಪದ ಗಾಯಗಳಾಗಿವೆ.ನಾಗಪುರದಿಂದ ಪುಣೆಗೆ ಸಂಚರಿಸುತ್ತಿದ್ದ ಈ ಬಸ್ ಜಿಲ್ಲೆಯ ಸಿಂದ್‌ಖೇಡಾರಾಜಾ ಸಮೀಪ ತಡರಾತ್ರಿ ೧.೩೦ ರಿಂದ ೨ ಗಂಟೆ ವೇಳೆ ವೇಗವಾಗಿ ಚಲಿಸುತ್ತಿದ್ದ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.ಪ್ರಾಥಮಿಕ ಮಾಹಿತಿಯ ಪ್ರಕಾರ ಬಸ್‌ನ ಚಕ್ರ ಸ್ಫೋಟಗೊಂಡು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ, ೨೬ ಮಂದಿ ಬೆಂಕಿಗಾಹುತಿಯಾಗಿದ್ದಾರೆ ಎಂದು ಬುಲ್ದಾನ ಎಸ್ಪಿ ಸುನಿಲ್ ಕದಾಸ್ನೆ ಮಾಹಿತಿ ನೀಡಿದ್ದಾರೆ.ಗಾಯಗೊಂಡ ೮ ಮಂದಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಪೈಕಿ ಕೆಲವರಿಗೆ ಗಂಭೀರ ಸ್ವರೂಪದ ಸುಟ್ಟ ಗಾಯಗಳಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ.ಬಸ್ ಅಪಘಾತದ ಘಟನೆಯಲ್ಲಿ ಬಸ್ ಚಾಲಕ ಬದುಕುಳಿದಿದ್ದಾರೆ. ಪ್ರಯಾಣಿಕರು ಸುಟ್ಟು ಕರಕಲಾಗಿರುವುದರಿಂದ ಅವರ ಗುರುತು ಹಚ್ಚುವುದು ಪೊಲೀಸರಿಗೆ ಮತ್ತು ಸಂಬಂಧಿಕರಿಗೆ ಕಷ್ಟಸಾಧ್ಯವಾಗಿದೆ. ತಮ್ಮವರನ್ನು ಕಳೆದುಕೊಂಡು ಕುಟುಂಬ ಸದಸ್ಯರ ರೋಧನ ಮುಗಿಲು ಮುಟ್ಟಿದೆ. ಶವಗಳನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.ಬಸ್ ಅಪಘಾತ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ “ಈ ಕ್ಷಣದಲ್ಲಿ ಶವಗಳನ್ನು ಗುರುತಿಸುವುದು ಮತ್ತು ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸುವುದು ಆದ್ಯತೆಯಾಗಿದೆ” ಎಂದು ಹೇಳಿದ್ದಾರೆ.ಈ ಮಧ್ಯೆ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಪರಿಸ್ಥಿತಿ ಪರಮಾರ್ಶೆ ನಡೆಸಿದರು.
ಇದೊಂದು ದುರದೃಷ್ಟಕರ ಘಟನೆ. ಟಯರ್ ಸ್ಫೋಟಗೊಂಡ ಬಳಿಕ ಈ ಭೀಕರ ದುರಂತ ಸಂಭವಿಸಿದೆ ಎಂದು ತಿಳಿಸಿದರು.

ಪ್ರಧಾನಿ ಸಂತಾಪ
ಮಹಾರಾಷ್ಟ್ರದ ಸಮೃದ್ಧಿ-ಮಹಾಮಾರ್ಗ್ ಎಕ್ಸ್‌ಪ್ರೆಸ್‌ವೇಯಲ್ಲಿ ಬಸ್ ಅಪಘಾತದಿಂದ ೨೫ ಮಂದಿ ಸುಟ್ಟು ಕರಕಲಾಗಿದ್ದು, ೮ ಮಂದಿ ಗಾಯಗೊಂಡಿರುವ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿ ಮೃತರಿಗೆ ತಲಾ ೨ ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ೫೦ ಸಾವಿರ ಪರಿಹಾರ ಪ್ರಕಟಿಸಿದ್ದಾರೆ.
ಘಟನೆಯ ಬಗ್ಗೆ ತೀವ್ರ ದುಃಖಿತನಾಗಿದ್ದೇನೆ. ಪ್ರಾಣ ಕಳೆದುಕೊಂಡವರ ಕುಟುಂಬಗಳೊಂದಿಗೆ ನನ್ನ ಪ್ರಾರ್ಥನೆ ಇದೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ. ಸಂತ್ರಸ್ತರಿಗೆ ಸ್ಥಳೀಯ ಆಡಳಿತ ಸಾಧ್ಯವಿರುವ ಎಲ್ಲ ನೆರವು ನೀಡಲಿದೆ ಎಂದು ಹೇಳಿದ್ದಾರೆ.
೫ ಲಕ್ಷ ಪರಿಹಾರ
ಬಸ್ ಅಪಘಾತ ಪ್ರಕರಣದಲ್ಲಿ ಮೃತಪಟ್ಟ ಕುಟುಂಬಗಳ ಸದಸ್ಯರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ತಲಾ ೫ ಲಕ್ಷ ಪರಿಹಾರ ಪ್ರಕಟಿಸಿದ್ದಾರೆ.
ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಅಪಘಾತಕ್ಕೀಡಾದವರಿಗೆ ತಕ್ಷಣದ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗಾಯಾಳುಗಳಿಗೆ ಸರ್ಕಾರಿ ವೆಚ್ಚದಲ್ಲಿ ತಕ್ಷಣದ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ.
ಸಿದ್ದು ಸಂತಾಪ
ಮಹಾರಾಷ್ಟ್ರದ ಬುಲ್ಡಾನದಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ೨೬ ಮಂದಿ ಸಜೀವ ದಹನವಾಗಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಘಾತ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರವರು, ಮಹಾರಾಷ್ಟ್ರದ ಬುಲ್ಟಾನಾದಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ೨೫ ಮಂದಿ ಸಜೀವ ದಹನವಾಗಿರುವ ಸುದ್ದಿ ಕೇಳಿ ಆಘಾತವಾಯಿತು ಎಂದಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ತಮ್ಮವರನ್ನು ಕಳೆದುಕೊಂಡ ದುಃಖತಪ್ತ ಕುಟುಂಬಗಳಿಗೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿಗಳು ಟ್ವೀಟ್‌ನಲ್ಲಿ ಹೇಳಿದ್ದಾರೆ.