೨೫ ವರ್ಷ ಮೇಲ್ಪಟ್ಟವರಿಗೆ ಲಸಿಕೆ: ಪ್ರಧಾನಿಗೆ ಉದ್ದವ್ ಮನವಿ

ಮುಂಬೈ, ಏ.೬-ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ ಹೆಚ್ಚಳದಲ್ಲಿ ಮಹಾರಾಷ್ಟ್ರದ ಪಾಲು ಅತ್ಯಧಿಕವಾಗಿರುವ ಹಿನ್ನೆಲೆಯಲ್ಲಿ ೨೫ ವರ್ಷ ದಾಟಿದ ಮಂದಿಗೆ ಲಸಿಕೆ ಹಾಕಲು ಅನುಮತಿ ನೀಡುವಂತೆ ಮಹಾರಾಷ್ಟ್ರ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.
ಮಹಾರಾಷ್ಟ್ರದಲ್ಲಿ ನಿತ್ಯ ಸೋಂಕು ಹೆಚ್ಚಾಗುವುದು ಆತಂಕ ತರಿಸಿದೆ., ಹೀಗಾಗಿ ೨೫ ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಅನುಮತಿ ನೀಡಬೇಕು ಎಂದು ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ನಿತ್ಯ ದಾಖಲೆ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಇಂದು ೪೭,೨೮೮ ಮಂದಿಗೆ ಹೊಸದಾಗಿ ಸೊಂಕು ಧೃಢಪಟ್ಟಿದೆ. ಸದ್ಯ ದೇಶದಲ್ಲಿರುವ ಒಟ್ಟಾರೆ ಸಕ್ರಿಯ ಪ್ರಕರಣಗಳಲ್ಲಿಯೂ ಮಹಾರಾಷ್ಟ್ರ ಮುಂದೆ ಇದೆ, ಹೀಗಾಗಿ ೨೫ ವರ್ಷ ದಾಟಿದ ಮಂದಿಗೆ ಲಸಿಕೆ ನೀಡಿಕೆಗೆ ಅನುಮತಿ ನೀಡಿ ಎಂದು ಮನವಿ ಸಲ್ಲಸಿದ್ದಾರೆ,
ಮಹಾರಾಷ್ಟ್ರದಲ್ಲಿ ಬಹುಪಾಲು ಯುವ ಸಮುದಾಯ ಮನೆಯಿಂದ ಹೊರಗೆ ಕೆಲಸ ಮಾಡುವ ಅನಿವಾರ್ಯತೆ ಇದೆ. ಅದು ಅವರ ಜೀವನಧಾರವೂ ಕೂಡ. ಸೋಂಕು ಹೆಚ್ಚಳದಿಂದ ಮನೆಯಲ್ಲಿ ಉಳಿದರೆ ಅವರ ಜೀವನ ನಿರ್ವಹಣೆ ಮೇಲೆ ಪರಿಣಾಮ ಬೀರಲಿದೆ ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಅವಕಾಶ ನೀಡುವಂತೆ ಉದ್ದವ್ ಠಾಕ್ರೆ ಮನವಿಯಲ್ಲಿ ತಿಳಿಸಿದ್ದಾರೆ.
ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ನಾಡಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸಲಿದ್ದು ಆ ಸಭೆಯಲ್ಲಿ ಎಲ್ಲಾ ಮುಖ್ಯಮಂತ್ರಿಗಳ ಅಭಿಪ್ರಾಯ ಆಲಿಸಿ ಆ ನಂತರ ಪ್ರಧಾನಿ ಮೋದಿ ಸೋಂಕು ನಿಗ್ರಹಕ್ಕೆ ಅಗತ್ಯ ಕ್ರಮ ಪ್ರಕಟಿಸುವ ಸಾದ್ಯತೆಗಳಿವೆ.