೨೫೦ ಕೋ.ರೂ. ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ: ಭಟ್

ಉಡುಪಿ, ಎ.೧೭- ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ೨೫೦ ಕೋಟಿ ರೂ. ವೆಚ್ಚದ ಆಧುನಿಕ ಒಳಚರಂಡಿ ವ್ಯವಸ್ಥೆಯ (ಯುಜಿಡಿ) ನಿರ್ಮಾಣಕ್ಕೆ ಸಮಗ್ರ ಯೋಜನಾ ವರದಿ (ಡಿಪಿಆರ್) ಯನ್ನು ಕೂಡಲೇ ಸಿದ್ಧಪಡಿಸುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳಿಗೆ ಶಾಸಕ ಕೆ.ರಘುಪತಿ ಭಟ್ ಸೂಚಿಸಿದ್ದಾರೆ.
ಉಡುಪಿ ನಗರಸಭೆಯ ಒಳಚರಂಡಿ ವ್ಯವಸ್ಥೆಗಾಗಿ ಡಿಪಿಆರ್ ವರದಿಗೆ ಸಂಬಂಧಿಸಿ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ನಗರಸಭಾ ಸದಸ್ಯರು ಹಾಗೂ ಅಧಿಕಾರಿಗಳ ತುರ್ತು ಸಭೆಯಲ್ಲಿ ಸಂಬಂಧಿತ ಅಧಿಕಾರಿಗಳಿಂದ ಯೋಜನೆಯ ಸಮಗ್ರ ಮಾಹಿತಿ ಪಡೆದು ಅವರು ಮಾತನಾಡುತಿದ್ದರು. ನಗರಕ್ಕೆ ಸಮರ್ಪಕ ಒಳಚರಂಡಿ ವ್ಯವಸ್ಥೆಗಾಗಿ ಸಮಗ್ರವಾದ ವರದಿಯೊಂದನ್ನು ಸಲ್ಲಿಸುವಂತೆ ಈ ಹಿಂದೆ ಕುಂಡ್ಸೆಪ್‌ಗೆ ಸೂಚಿಸಲಾಗಿತ್ತು. ಆದರೆ ಅವರು ನೀಡಿರುವ ಯೋಜನೆ ಯನ್ನು ಕಾರ್ಯರೂಪಕ್ಕೆ ತರುವುದು ಕಷ್ಟವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಸೂಚಿಸಲಾಗಿತ್ತು. ಇದಕ್ಕಾಗಿ ೨೫ ಲಕ್ಷ ರೂ. ಅನುದಾನ ನೀಡಿ ವಿಸ್ಕೃತ ಯೋಜನಾ ವರದಿ ಸಲ್ಲಿಸುವಂತೆ ತಿಳಿಸಲಾಗಿತ್ತು ಎಂದವರು ಹೇಳಿದರು. ಇದೀಗ ಮಂಡಳಿಯ ಅಧಿಕಾರಿಗಳು ಸರ್ವೇ ನಡೆಸಿ ೨೫೦ ಕೋಟಿ ರೂ. ವೆಚ್ಚದ ಯೋಜನೆ ಹಾಗೂ ಸಮಗ್ರ ನಕ್ಷೆ ಸಿದ್ಧವಾಗಿದೆ. ಇದರಲ್ಲಿ ಕೆಲವೊಂದು ಸಣ್ಣ ಬದಲಾವಣೆ ಗಳನ್ನು ಮಾಡಬೇಕಿದ್ದು, ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜಂಟಿಯಾಗಿ ಪರಿಶೀಲನೆ ನಡೆಸಿ ಯೋಜನೆಯನ್ನು ಅಂತಿಮಗೊಳಿಸುವಂತೆ ಶಾಸಕರು ತಿಳಿಸಿದರು. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳು ಸರ್ವೇ ನಡೆಸಿ ವರದಿ ತಯಾರಿಸಿದ್ದಾರೆ. ಅದರಂತೆ ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ೯೩ ಕಿ.ಮೀ. ವ್ಯಾಪ್ತಿಯಲ್ಲಿ ಯುಜಿಡಿ ವ್ಯವಸ್ಥೆ ಇದೆ. ಪೂರ್ಣ ಪ್ರಮಾಣದಲ್ಲಿ ೮ ವಾರ್ಡ್‌ಗಳು ಹಾಗೂ ೭ ವಾರ್ಡ್‌ಗಳಲ್ಲಿ ಭಾಗಶಃ ಯುಜಿಡಿ ವ್ಯವಸ್ಥೆ ಇದೆ. ಸದ್ಯ ೨೮೦೦ ಮ್ಯಾನ್‌ಹೋಲ್, ೪ ವೆಟ್‌ವೆಲ್ ಹಾಗೂ ೧೨ ಎಂಎಲ್‌ಡಿ ಎಸ್‌ಟಿಪಿ ಘಟಕವಿದೆ. ಮಂಡಳಿಯ ಅಧಿಕಾರಿಗಳು ಸರ್ವೇ ನಡೆಸಿ ಹೊಸದಾಗಿ ಕೊಟ್ಟ ಪ್ರಸ್ತಾವನೆಯಲ್ಲಿ ಯುಜಿಡಿ ವ್ಯವಸ್ಥೆಯನ್ನು ೧೪೮ ಕಿ.ಮೀ.ಗೆ ವಿಸ್ತರಿಸಲಾಗಿದೆ. ಸುಮಾರು ೫೫೦೦ ಮ್ಯಾನ್‌ಹೋಲ್‌ಗಳು ನಿರ್ಮಾಣವಾಗ ಬೇಕಿವೆ. ಹಿಂದಿನ ೨ ವೆಟ್‌ವೆಲ್‌ಗಳ ಜೊತೆಗೆ ಹೆಚ್ಚುವರಿಯಾಗಿ ಮೂರು ವೆಟ್‌ವೆಲ್‌ಗಳ ಅಗತ್ಯವಿದೆ. ಹೀಗಾಗಿ ಒಟ್ಟು ೫ ವೆಟ್‌ವೆಲ್, ೧೧ ಸೆಪ್ಟಿಕ್ ಟ್ಯಾಂಕ್ ನಿರ್ಮಾಣಕ್ಕೆ ಮಂಡಳಿ ಶಿ?ರಸ್ಸು ಮಾಡಿದೆ. ೪ ಮೀ. ಆಳಕ್ಕೆ ಈ ಮ್ಯಾನ್‌ವೆಲ್‌ಗಳನ್ನು ನಿರ್ಮಿಸಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದರು. ಒಳಚರಂಡಿ ಯೋಜನೆಗೆ ಸುಮಾರು ೨೫೦ ಕೋಟಿ ರೂ. ವೆಚ್ಚವಾಗಲಿದೆ. ವರದಿಗೆ ನಗರಸಭೆಯ ಅನುಮೋದನೆ ಬೇಕಿದ್ದು, ಯೋಜನೆ ಡಿಪಿಆರ್ ಅಂತಿಮಗೊಂಡ ತಕ್ಷಣ ನಗರಸಭೆಯ ವಿಶೇಷ ಸಭೆ ಕರೆದು ಒಪ್ಪಿಗೆ ಸೂಚಿಸಲಾಗುತ್ತದೆ. ಮಂಡಳಿ ಡಿಪಿಆರ್‌ಯನ್ನು ತಾಂತ್ರಿಕ ಸಮಿತಿಯ ಮುಂದಿಟ್ಟು ಅನುಮತಿ ಪಡೆದುಕೊಳ್ಳುತ್ತದೆ ಎಂದರು. ಇದರ ಜೊತೆಗೆ ಸುಮಾರು ೪೫೦ ಕೋಟಿ ರೂ. ವೆಚ್ಚದಲ್ಲಿ ಮಣಿಪಾಲ-ಸಂತೆಕಟ್ಟೆಯ ಹೊಸ ಒಳಚರಂಡಿ ನಿರ್ಮಾಣ ಮಾಡಲಾಗುವುದು. ಈ ಬಗ್ಗೆ ಡಿಪಿಆರ್ ಸಿದ್ಧವಾಗಿ ಸಲ್ಲಿಕೆಯೂ ಆಗಿದೆ. ಈ ೨ ಯೋಜನೆಗಳು ಒಟ್ಟಿಗೆ ಜಾರಿಯಾದರೂ ಅನುಕೂಲ. ಈ ಬಾರಿಯ ಬಜೆಟ್‌ನಲ್ಲಿಟ್ಟ ಅನುದಾನ ಖಾಲಿಯಾಗುವ ಮುನ್ನ ನಗರದ ಒಳಚರಂಡಿಗೆ ಅನುದಾನ ಪಡೆಯಲು ಪ್ರಯತ್ನಿಸಲಾಗುವುದು ಎಂದರು. ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಪೌರಾಯುಕ್ತ ಡಾ. ಉದಯ್ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಆಂಚನ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯನಿರ್ವಾಹಕ ಅಭಿಯಂತರ ಚಂದ್ರಶೇಖರ್ ಎಂ., ಸಹಾಯಕ ಕಾರ್ಯಪಾಲಕ ಅಭಿಯಂತರ ರವಿ ಎಂ.ಬಿ., ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್‌ರಾಜ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಪ್ರತಿಪಕ್ಷ ನಾಯಕ ರಮೇಶ್ ಕಾಂಚನ್ ಮುಂತಾದವರು ಉಪಸ್ಥಿತರಿದ್ದರು.