೨೫೦ ಕೆ.ಜಿ. ಗಾಂಜಾ ವಶ: ಮೂವರ ಸೆರೆ

ಕಾಸರಗೋಡು, ಮೇ ೨೯- ಟೂರಿಸ್ಟ್ ಬಸ್ಸಿನಲ್ಲಿ ಸಾಗಾಟ ಮಾಡುತ್ತಿದ್ದ ಸುಮಾರು ಎರಡೂವರೆ ಕ್ವಿಂಟಾಲ್ ಗಾಂಜಾವನ್ನು ಕಾಸರಗೋಡು ಪೊಲೀಸರು ವಶಪಡಿಸಿಕೊಂಡಿದ್ದು ಮೂವರನ್ನು ಬಂಧಿಸಿದ್ದಾರೆ.

ಪೆರಿಯಾಟಡ್ಕದ ಕೆ. ಮೊಯಿದಿನ್ ಕುಂಞ (೨೮), ಚೆಂಗಳ ಮೇನಂಗೋಡ್ ನ ಮುಹಮ್ಮದ್ ರಹೀಸ್(೨೩) ಮತ್ತು ಚೆರ್ಕಳ ಬೇರ್ಕದ ಮುಹಮ್ಮದ್ ಹನೀಫ್ (೪೧) ಬಂಧಿತ ಆರೋಪಿಗಳು. ಇವರಿಂದ ೨೪೦ ಕಿಲೋ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಮುಹಮ್ಮದ್ ಹನೀಫ್ ನ ಬಾಡಿಗೆ ಮನೆಗೆ ದಾಳಿ ನಡೆಸಿದ ಪೊಲೀಸರು ಇದಲ್ಲದೆ ಪಿಸ್ತೂಲ್, ತಲವಾರು, ಕತ್ತಿ ಸೇರಿದಂತೆ ಮಾರಕಾಸ್ತ್ರಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಖಚಿತ ಮಾಹಿತಿಯಂತೆ ಡಿ ವೈಎಸ್ ಪಿ ಪಿ. ಸದಾನಂದನ್ ರವರ ನೇತೃತ್ವದ ಪೊಲೀಸ್ ತಂಡ ಚೆಟ್ಟು೦ಗುಯಿ ಬಳಿ ಬಸ್ಸನ್ನು ತಡೆದು ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ. ಟೂರಿಸ್ಟ್ ಬಸ್ಸಿನ ಲಗೇಜ್ ಕ್ಯಾರಿಯರ್ ನಲ್ಲಿ ಸಾಗಾಟ ಮಾಡಲಾಗುತ್ತಿತ್ತು. ಬಂಧಿತನಲ್ಲಿ ಟೂರಿಸ್ಟ್ ಬಸ್ ಮಾಲಕನ ಮಗನೂ ಒಳಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಸ್ಥಳಕ್ಕೂ ದಾಳಿ ನಡೆಸಲಾಯಿತು.