೨೪ ಸೊಂಕಿತರು ಸಾವು:ಸಚಿವರ ರಾಜೀನಾಮೆಗೆ ಒತ್ತಾಯ

ರಾಯಚೂರು, ಮೇ.೪-ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ೨೪ ಮಂದಿ ಸಾವಿನ ಹೊಣೆಹೊತ್ತು ಆರೋಗ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ರಾಜೀನಾಮೆ ನೀಡಿ ಮೃತರಿಗೆ ಸರ್ಕಾರದಿಂದ ಪರಿಹಾರಧನ ಘೋಷಣೆ ಮಾಡಬೇಕೆಂದು ಒತ್ತಾಯಿಸಿ ಕನ್ನಡಿಗರ ರಕ್ಷಣಾ ಸಂಘ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಕೊರೋನ ಮಹಾಮಾರಿಯಿಂದ ಎಲ್ಲ ಕಡೆ ಆತಂಕ ಸೃಷ್ಟಿಯಾಗಿದ್ದು , ಇದರ ನಿರ್ವಹಣೆಯ ಹೊಣೆ ಹೊತ್ತಿರುವ ರಾಜ್ಯ ಸರ್ಕಾರ ತನ್ನ ಬೇಜವಾಬ್ದಾರಿಯಿಂದಾಗಿ ನಿನ್ನೆ ರಾತ್ರಿ ಚಾಮರಾಜನಗರದ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ೨೪ ಮಂದಿ ಸಾವನ್ನಪ್ಪಿರುವುದು ದುರದೃಷ್ಟಕರವಾಗಿದೆ . ಮೃತರಿಗೆ ಸಕಾಲದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಕ್ಸಿಜನ್ ಸಿಕ್ಕಿದ್ದರೆ ಬದುಕಿ ಉಳಿಯುತ್ತಿದ್ದರು , ಅವರ ಸಾವಿಗೆ ಸರ್ಕಾರವೇ ನೇರ ಹೊಣೆ ಎಂದು ದೂರಿದರು.
ಇದು ಸರ್ಕಾರ ಮಾಡಿದ ಕೊಲೆ ಎಂದರೆ ತಪ್ಪಾಗಲಾರದು.೨೪ ಜನರ ಸಾವುಗಳಿಗೆ ರಾಜ್ಯದ ಮುಖ್ಯಮಂತ್ರಿ,ಆರೋಗ್ಯ ಸಚಿವರು,ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು , ಕರ್ತವ್ಯಲೋಪವೆಸಗಿದ ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆ ಹೊಣೆಗಾರರು ಆರೋಪಿಸಿದರು.
ಚಾಮರಾಜನಗರ ಆಸ್ಪತ್ರೆಯಲ್ಲಿ ೧೮೦ ಬೆಡ್‌ಗಳಿವೆ . ಅದರಲ್ಲಿ ೧೨೦ ಆಕ್ಸಿಜನ್ ಭಟ್ ಗಳಿವೆ.೨೦ ವೆಂಟಿಲೇಟರ್ ಬೆಡ್ ಗಳಿವೆ,ದಿನಕ್ಕೆ ೩೫೦ ಆಕ್ಸಿಜನ್ ಸಿಲಿಂಡರ್‌ಗಳು ಬೇಕು.ಸಿಲೆಂಡರ್ ಮೈಸೂರಿನಿಂದ ಸರಬರಾಜು ಆಗುತ್ತವೆ . ಶುಕ್ರವಾರದಿಂದ ಆಕ್ಸಿಜನ್ ಸಮಸ್ಯೆ ಆಗಿದ್ದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಒಟ್ಟಿನಲ್ಲಿ ಕರ್ತವ್ಯ ಲೋಪದಿಂದಾಗಿ ಈ ದುರಂತ ಸಂಭವಿಸಿದೆ . ಈ ದುರಂತ ಕುರಿತು ನ್ಯಾಯಾಂಗ ತನಿಖೆ ಆಗಬೇಕು ಆಗ ಮಾತ್ರ ಸತ್ಯ ಹೊರ ಬರುತ್ತದೆ. ಅರೋಗ್ಯ ಸಚಿವ ಸ್ಥಳಕ್ಕೆ ಹನ್ನೆರಡು ಗಂಟೆಯ ನಂತರ ಹೋಗಿದ್ದಾರೆ.ಇದು ಸರ್ಕಾರದ ದಿವ್ಯ ನಿರ್ಲಕ್ಷ ಎಂದು ದೂರಿದರು.
೨೪ ಜನರಲ್ಲಿ ಯುವಕರೇ ಹೆಚ್ಚಾಗಿರುವುದು ದುರಂತ,ಆದ್ದರಿಂದ ಕೂಡಲೇ ನ್ಯಾಯಾಂಗ ತನಿಖೆ ಮಾಡಿ ಕೂಡಲೇ ಅಧಿಕಾರಿಯನ್ನು ವಜಾ ಮಾಡಬೇಕು. ಸಾವನ್ನಪ್ಪಿದವರ ಕುಟುಂಬಕ್ಕೆ ಸರ್ಕಾರ ಪರಿಹಾರ ಘೋಷಿಸಬೇಕು. ಈ ಸಾವುಗಳ ಹೊಣೆ ಹೊತ್ತು ಮುಖ್ಯಮಂತ್ರಿ , ಆರೋಗ್ಯ ಮಂತ್ರಿ , ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ನರಸಿಂಹಲು,ಇಮ್ರಾನ್,ಇಂದಿರಾ,ಲಕ್ಷ್ಮಿ,ಶೇಕ್ ಮಾಸಿಮ್,ಸೇರಿದಂತೆ ಇತರರು ಇದ್ದರು.