೨೩ರ ಚುನಾವಣೆ ಬಿಜೆಪಿ ಗೆಲುವಿಗೆ ಕಾರ್ಯತಂತ್ರ

ಬೆಂಗಳೂರಿನ ಹೊರವಲಯದಲ್ಲಿ ಇಂದು ನಡೆದ ಬಿಜೆಪಿಯ ಚಿಂತನಾ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿ.ಎಂ.ಗಳಾದ ಬಿ.ಎಸ್. ಯಡಿಯೂರಪ್ಪ, ಸದಾನಂದಗೌಡ, ಜಗದೀಶ್ ಶೆಟ್ಟರ್, ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್‌ರವರು ಭಾಗವಹಿಸಿರುವುದು.

ಬೆಂಗಳೂರು,ಜು.೧೫- ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತಗಳಿಸಿ ಅಧಿಕಾರ ಸೂತ್ರ ಹಿಡಿಯಲು ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ದಿನವಿಡೀ ಇಂದು ಚಿಂತನಾ-ಮಂಥನ ನಡೆಸಿದರು.
ದೇವನಹಳ್ಳಿ ಬಳಿಯ ನಂದಿಬೆಟ್ಟದ ತಪ್ಪಲಿನಲ್ಲಿರುವ ಪ್ರತಿಷ್ಠಿತ ಖಾಸಗಿ ರೆಸಾರ್ಟ್‌ನಲ್ಲಿ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ನೇತೃತ್ವದಲ್ಲಿ ರಾಜ್ಯ ಬಿಜೆಪಿಯ ಈ ಮಹತ್ವದ ಚಿಂತನಾ ಸಭೆ ಇಂದು ಬೆಳಿಗ್ಗೆಯೇ ಆರಂಭವಾಗಿದೆ.
ಈ ಸಭೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್, ಆರ್‌ಎಸ್‌ಎಸ್‌ನ ಪ್ರಮುಖರಾದ ಮುಕುಂದ್.ಜಿ. ತಿಪ್ಪೇಸ್ವಾಮಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲು, ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ ರವಿ ಸೇರಿದಂತೆ ಕೋರ್‌ಕಮಿಟಿಯ ಸದಸ್ಯರುಗಳು, ಪ್ರಮುಖ ಮುಖಂಡರುಗಳು ಭಾಗಿಯಾಗಿದ್ದಾರೆ.
ಮುಂದಿನ ಚುನಾವಣೆಯನ್ನು ಗೆಲ್ಲಲು ಯಾವ ಕಾರ್ಯತಂತ್ರಗಳನ್ನು ರೂಪಿಸಬೇಕು. ಚುನಾವಣೆಗೆ ಈಗಿನಿಂದಲೇ ಏನೆಲ್ಲ ತಯಾರಿಗಳು ಆಗಬೇಕು ಎಂಬ ಕಾರ್ಯಸೂಚಿಯನ್ನಿಟ್ಟುಕೊಂಡು ಈ ಸಭೆಯನ್ನು ನಡೆಸಲಾಗುತ್ತಿದೆ.
ಮೂರು ಹಂತಗಳಲ್ಲಿ ಈ ಸಭೆ ನಡೆದಿದ್ದು, ಪ್ರಥಮ ಹಂತದಲ್ಲಿ ಕೋರ್ ಕಮಿಟಿ ಸದಸ್ಯರು ಹಾಗೂ ಪ್ರಮುಖ ಮುಖಂಡರ ಸಭೆ ನಡೆದಿದ್ದು, ಈ ಸಭೆಯಲ್ಲಿ ಪಕ್ಷ ಹಾಗೂ ಸರ್ಕಾರದ ನಡುವಿನ ಸಮನ್ವಯತೆ, ಸರ್ಕಾರದ ವರ್ಚಸ್ಸನ್ನು ರೂಪಿಸಬೇಕಾದ ಕಾರ್ಯಕ್ರಮಗಳು, ಕೇಂದ್ರ ಹಾಗೂ ರಾಜ್ಯಸರ್ಕಾರದ ಜನಪರ ಯೋಜನೆಗಳನ್ನು ಮನೆ ಮನೆಗೆ ತಲುಪಿಸಲು ಅನುಸರಿಸಬೇಕಾದ ಹಾಗೂ ಕಾರ್ಯತಂತ್ರ ಮುಂಬರುವ ಚುನಾವಣೆಗಳಿಗೆ ಪಕ್ಷವನ್ನು ಸಜ್ಜುಗೊಳಿಸುವ ವಿಚಾರ ಸೇರಿದಂತೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಮಹತ್ವದ ಚರ್ಚೆ ನಡೆಸಲಾಗಿದೆ.
ಎರಡನೇ ಹಂತದ ಸಭೆಯಲ್ಲಿ ಸಚಿವರುಗಳ ಕಾರ್ಯವೈಖರಿ, ಇಲಾಖೆಗಳ ಪ್ರಗತಿ ಸೇರಿದಂತೆ ಸಚಿವರುಗಳ ಕೆಲಸಗಳ ಪರಾಮರ್ಶೆಯನ್ನು ಮುಖಂಡರುಗಳು ನಡೆಸಲಿದ್ದು, ಈ ಸಭೆಯಲ್ಲಿ ರಾಜ್ಯಸರ್ಕಾರದ ಸಚಿವರುಗಳು ಭಾಗಿಯಾಗಿ ತಮ್ಮ ಇಲಾಖೆಯ ಕಾರ್ಯಸಾಧನೆಯನ್ನು ಸಭೆಯ ಮುಂದಿಟ್ಟರು.
ಸಚಿವರುಗಳ ಕಾರ್ಯವೈಖರಿ, ಸಾಧನೆಯನ್ನು ಪರಾಮರ್ಶಿಸಿದ ಹಿರಿಯ ನಾಯಕರುಗಳು ಹಲವು ಸಚಿವರುಗಳಿಗೆ ಕಾರ್ಯವೈಖರಿ ಸುಧಾರಿಸಿಕೊಳ್ಳುವಂತೆ ಕಿವಿಮಾತು ಹೇಳಿ ಹಲವು ಸಲಹೆ-ಸೂಚನೆಗಳನ್ನು ನೀಡಿದರು ಎನ್ನಲಾಗಿದೆ.
ಕೊನೆಯದಾಗಿ ಚಿಂತನಾ-ಮಂಥನ ಬೈಠಕ್‌ನಲ್ಲಿ ಆರ್‌ಎಸ್‌ಎಸ್ ಮತ್ತು ಬಿಜೆಪಿ ಆಯ್ದ ನಾಯಕರುಗಳ ಮಹತ್ವದ ಸಭೆ ನಡೆದಿದ್ದು, ಈ ಸಭೆಯಲ್ಲಿ ಆರ್‌ಎಸ್‌ಎಸ್‌ನ ಸಹಕಾರ್ಯವಾಹಕ ಮುಕುಂದ್ ಕ್ಷೇತ್ರೀಯ ಸಂಘವಾಹಕ ವಿ. ನಾಗರಾಜ್, ಕ್ಷೇತ್ರೀಯ ಕಾರ್ಯವಾಹಕ ತಿಪ್ಪೆಸ್ವಾಮಿ ಕ್ಷೇತ್ರೀಯ ಪ್ರಚಾರಕ ಸುಧೀರ್ ಸೇರಿದಂತೆ ಪ್ರಮುಖ ಆರ್‌ಎಸ್‌ಎಸ್ ಮುಖಂಡರು
ಭಾಗಿಯಾಗಿ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಪರಾಮರ್ಶೆ ನಡೆಸಿದರು.
ಈ ಸಭೆಯಲ್ಲಿ ಬಿ.ಎಲ್ ಸಂತೋಷ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅರುಣ್‌ಸಿಂಗ್, ನಳೀನ್‌ಕುಮಾರ್ ಕಟೀಲು, ಸಿ.ಟಿ ರವಿ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್‌ಶೆಟ್ಟರ್, ಡಿ.ವಿ ಸದಾನಂದಗೌಡ, ಕೇಂದ್ರ ಸಚಿವ ಪ್ರಹ್ಲಾದ್‌ಜೋಷಿ, ಕೆಲ ಪ್ರಮುಖ ನಾಯಕರುಗಳು ಮಾತ್ರ ಭಾಗಿಯಾಗಿದ್ದರು.
೨೦೨೩ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಂಘಟನಾತ್ಮಕವಾಗಿ ಯಾವ ದಾರಿಯಲ್ಲಿ ಸಾಗಬೇಕು ಎಂಬ ಬಗ್ಗೆ ಸುದೀರ್ಘ ಚರ್ಚೆಗಳು ನಡೆದವು ಎಂದು ಬಿಜೆಪಿ ಮೂಲಗಳು ಹೇಳಿವೆ.